ವಾರಂಗಲ್ (ತೆಲಂಗಾಣ):ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಹಣದ ಹೊಳೆ ಹರಿಯುತ್ತಿದೆ. ವಾರಂಗಲ್ನಲ್ಲಿ ಶುಕ್ರವಾರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಬಾನೆಟ್‌ನಡಿ ಬಚ್ಚಿಟ್ಟಿದ್ದ 50 ಲಕ್ಷ ರೂಪಾಯಿ ಹಣ ತುಂಬಿದ್ದ ಬ್ಯಾಗ್ ಕಳವು ಮಾಡಲಾಗಿದೆ. ಇನ್ನೊಂದು ಘಟನೆಯಲ್ಲಿ ವಿಕಾರಾಬಾದ್ ಜಿಲ್ಲೆಯ ಬಶೀರಾಬಾದ್ನಲ್ಲಿ ಪತ್ರಕರ್ತರಿಂದ 44 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾರಂಗಲ್ ಜಿಲ್ಲೆಯಲ್ಲಿ ಯಾವುದೋ ಪಕ್ಷದ ಅಭ್ಯರ್ಥಿಗೆ ಸೇರಿದ ಹಣದ ಬ್ಯಾಗ್ ಅನ್ನು ಪೊಲೀಸರಿಗೆ ಸಿಗದಂತೆ ಕಾರಿನ ಬಾನೆಟ್ನಲ್ಲಿ ಇಟ್ಟು ಸಾಗಿಸಲಾಗುತ್ತಿತ್ತು. ಈ ವೇಳೆ ಕಾರು ವಾರಂಗಲ್-ಖಮ್ಮಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದವರು ಬಿಟ್ಟು ಓಡಿ ಹೋಗಿದ್ದಾರೆ. ಇದೇ ಮಾರ್ಗವಾಗಿ ಸಾಗುತ್ತಿದ್ದ ದಾರಿಹೋಕರೊಬ್ಬರು ಕೆಲವು ಸುಟ್ಟ ನೋಟುಗಳನ್ನು ಗಮನಿಸಿ ಬಾನೆಟ್ ಅಡಿಯಲ್ಲಿ ಬಚ್ಚಿಟ್ಟಿದ್ದ ಬ್ಯಾಗ್ ಅನ್ನು ಕದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ಬ್ಯಾಗ್ನಲ್ಲಿ ಸುಮಾರು 50 ಲಕ್ಷ ರೂಪಾಯಿ ಇತ್ತು ಎಂದು ಹೇಳಲಾಗಿದೆ.
ವಾರಂಗಲ್ ಪೂರ್ವ ವಲಯ ಡಿಸಿಪಿ ರವೀಂದರ್ ಹಾಗೂ ಮಾಮನೂರು ಎಸಿಪಿ ಸತೀಶ್ ಬಾಬು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣದ ಮಾಲೀಕರು ಯಾರು ಮತ್ತು ಏಕೆ ಹಣವನ್ನು ಸಾಗಿಸುತ್ತಿದ್ದರು. ಹಣದ ಬ್ಯಾಗ್ ಯಾರು ಕದ್ದರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಕಾರನ್ನು ಮಣಿರಾಜು ಚಕಿಲಾ ಎಂಬಾತನ ಹೆಸರಿನಲ್ಲಿ ಮುಸರಾಂಬಾಗ್ ವಿಳಾಸದಲ್ಲಿ ನೋಂದಾಯಿಸಲಾಗಿದೆ. ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಹಣ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.