ಬದರಿನಾಥ (ಉತ್ತರಾಖಂಡ):ಚಾರ್ಧಾಮ್ ಯಾತ್ರೆಯು ಏಪ್ರಿಲ್ 22 ರಿಂದ ಪ್ರಾರಂಭವಾಗಿದೆ. ಚಾರ್ ಧಾಮ್ಗಳ ಪೈಕಿ ಹಿಂದೂ ಪವಿತ್ರ ಪುಣ್ಯ ಕ್ಷೇತ್ರವಾಗಿರುವ ಬದರಿನಾಥ ದೇವಸ್ಥಾನದ ಬಾಗಿಲುಗಳನ್ನು ಭಕ್ತರ ದರ್ಶನಕ್ಕಾಗಿ ಇಂದು ತೆರೆಯಲಾಗಿದೆ. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅರ್ಚಕರು ಮಹಾದ್ವಾರ ತೆರೆದರು. ಇದಕ್ಕೂ ಮೊದಲು ದೇವಸ್ಥಾನದ ಮುಂಭಾಗದಲ್ಲಿ ಪೂಜೆ ನೆರವೇರಿಸಲಾಯಿತು. ನಂತರ 7.10 ಕ್ಕೆ ಬದರಿನಾಥ ದೇವಾಲಯದ ಬಾಗಿಲು ತೆರೆಯಲಾಯಿತು. ಬಳಿಕ ದೇವರಿಗೆ ಮೊದಲ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮಾಡಲಾಯಿತು.
ಈ ವೇಳೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಬದರಿನಾಥ ದೇವಸ್ಥಾನವನ್ನು 20 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗಿದ್ದು, ದರ್ಶನ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭಿಸಲಾಗಿದೆ. ಏಪ್ರಿಲ್ 22 ರಂದು, ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲುಗಳನ್ನು ತೆರೆಯಲಾಗಿತ್ತು. ಏಪ್ರಿಲ್ 25 ರಂದು ಕೇದಾರನಾಥ ದೇವಸ್ಥಾನದ ಬಾಗಿಲನ್ನು ತೆರೆಯಲಾಯಿತು. ಇದೀಗಾ ಇಂದು ಬದರಿನಾಥ ದೇವಾಲಯದ ಬಾಗಿಲು ತೆರೆಯುವುದರೊಂದಿಗೆ, ಸಂಪೂರ್ಣ ಚಾರ್ಧಾಮ್ ಯಾತ್ರೆ ಆರಂಭಗೊಂಡಿದೆ.
ಈವರೆಗೂ 95 ಸಾವಿರಕ್ಕೂ ಹೆಚ್ಚು ಭಕ್ತರು ಚಾರ್‌ಧಾಮಕ್ಕೆ ಭೇಟಿ ನೀಡಿರುವುದು ಗಮನಾರ್ಹ. ಆರಂಭಿಕ ಹಂತದಲ್ಲೇ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿದ್ದು, ಚಾರಧಾಮ್ ಯಾತ್ರೆ ಮುಕ್ತಾಯದ ವೇಳೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕೊರೊನಾ ನಂತರ, 2022 ರಲ್ಲಿ ಚಾರ್ಧಾಮ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಇದೀಗ 2023 ಚಾರ್ಧಾಮ್ ಯಾತ್ರೆ ಆರಂಭಗೊಂಡಿದ್ದು, ಈಗಾಗಲೇ ಲಕ್ಷಕ್ಕೂ ಅಧಿಕ ಭಕ್ತರು ಯಾತ್ರೆಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.