ಚೆನ್ನೈ(ತಮಿಳುನಾಡು): ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಬಂಧಿತರಾಗಿದ್ದ ಪ್ರಕಾಶಕ ಮತ್ತು ಬಲಪಂಥೀಯ ವ್ಯಾಖ್ಯಾನಕಾರ ಬದ್ರಿ ಶೇಷಾದ್ರಿ ಅವರಿಗೆ ಪೆರಂಬಲೂರು ಜಿಲ್ಲೆಯ ಕುನ್ನಂನಲ್ಲಿರುವ ಜಿಲ್ಲಾ ಮುನ್ಸಿಫ್ ಕಮ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಶೇಷಾದ್ರಿ ಅವರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೋರಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ವಜಾಗೊಳಿಸಿದ ಜಿಲ್ಲಾ ಮುನ್ಸಿಫ್ ಕಮ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್. ಕವಿತಾ ಅವರು ಪ್ರಕಾಶಕರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ವಕೀಲ ಕವಿಯರಸು ನೀಡಿದ ದೂರಿನ ಮೇರೆಗೆ ಕಾ ಬದ್ರಿ ಶೇಷಾದ್ರಿ ಅವರನ್ನು ಕುನ್ನಂ ಪೊಲೀಸರು ಜು.29 ರಂದು ಚೆನ್ನೈನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದರು.
ಕುನ್ನಂ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ (ಸೆಕ್ಷನ್ 153 ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು, 153-ಎ-ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು 505-ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾದ ಹೇಳಿಕೆಗಳು) ಬಂಧಿಸಿತ್ತು. ಬಂಧನದ ನಂತರ ಅವರನ್ನು ತಿರುಚ್ಚಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಸದ್ಯ ಜಾಮೀನು ಮಂಜೂರು ಮಾಡಿದ ನ್ಯಾಯಾಲಯವು 15 ದಿನಗಳ ಕಾಲ ತಿರುಚ್ಚಿಯಲ್ಲೇ ಇರಲು ಮತ್ತು ಶ್ರೀರಂಗಂ ಪೊಲೀಸ್ ಠಾಣೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಸಹಿ ಮಾಡುವಂತೆ ಸೂಚಿಸಿದೆ.