ಕೊಯಮತ್ತೂರು (ತಮಿಳುನಾಡು):ಕಾಡಾನೆಗಳು ತಮ್ಮ ಮರಿಗಳ ಬಗ್ಗೆ ಎಷ್ಟು ಪ್ರೀತಿ ಹೊಂದಿರುತ್ತವೆ ಎಂಬುದನ್ನು ಈ ವಿಡಿಯೋ ಸಾಕ್ಷೀಕರಿಸುತ್ತದೆ. ತಮಿಳುನಾಡಿನ ಕೊಯಮತ್ತೂರಿನ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡೊಂದು ಮರಿ ಆನೆಯನ್ನು ಗುಂಪಿನ ಮಧ್ಯದಲ್ಲಿ ನಡೆಸಿಕೊಂಡು ಅತ್ಯಂತ ಜಾಗೃತವಾಗಿ ಕರೆದೊಯ್ಯುತ್ತಿರುವ ದೃಶ್ಯವನ್ನು ಅರಣ್ಯಾಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ಸತ್ಯಮಂಗಲ ಅರಣ್ಯದಲ್ಲಿ ಕೆಲ ದಿನಗಳ ಹಿಂದಷ್ಟೇ ಜನಿಸಿದ ಮರಿ ಆನೆಯನ್ನು ಆನೆಗಳ ಗುಂಪು ಸುತ್ತುವರಿದು ಕರೆದೊಯ್ಯುತ್ತಿವೆ. ಇದನ್ನು ಅರಣ್ಯಾಧಿಕಾರಿ ಸುಸಂತ ನಂದಾ ಟ್ವೀಟ್ ಮಾಡಿದ್ದು, ಈ ಭೂಮಿ ಮೇಲೆ ಆನೆಗಳಿಗಿಂತಲೂ ಉತ್ಕೃಷ್ಟವಾಗಿ ಭದ್ರತೆಯನ್ನು ಒದಗಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಝಡ್+++ ಭದ್ರತೆಯಂತಿದೆ ಎಂದು ಬರೆದುಕೊಂಡಿದ್ದಾರೆ.
ಅಧಿಕಾರಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟಿಜನ್‌ಗಳು ಮುದ್ದಾದ ಮರಿ ಆನೆಯ ಮೇಲೆ ಪ್ರೀತಿಯ ಸುರಿಮಳೆ ಸುರಿಸಿದ್ದಾರೆ. "ಆನೆಗಳು ಎಷ್ಟು ಬಲವಾದ ಬಂಧವನ್ನು ಹೊಂದಿವೆ ಎಂಬುದನ್ನು ಇದು ತೋರಿಸುತ್ತದೆ. ಪ್ರತಿಯೊಂದು ಹೆಣ್ಣು ಆನೆಯು ಮರಿಯಾನೆಗಳಿಗೆ ತಾಯಿಯಾಗಿರುತ್ತದೆ. ದೇವರು ಒಳ್ಳೆಯದು ಮಾಡಲಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಮುದ್ದಾದ ಮರಿಯನ್ನು ದೇವರಾದ ಗಣೇಶನಿಗೆ ಹೋಲಿಸಿದ್ದಾರೆ. ಶಿವ ಮತ್ತು ಶಕ್ತಿದೇವಿಯ ಜೊತೆಗೆ ಗಣೇಶ ನಡೆದುಕೊಂಡು ಬರುವಂತಿದೆ ಎಂದು ಬರೆದಿದ್ದಾರೆ. ಈ ವೈರಲ್ ವಿಡಿಯೋಗೆ ಹಲವಾರು ಪ್ರಾಣಿಪ್ರಿಯರು ಮನಸೋತಿದ್ದಾರೆ. ಇದು 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.
ಇದನ್ನೂ ಓದಿ:ಭೂಕಂಪದಲ್ಲಿ ಸಾವಿರಾರು ಜನ ಸಾವು: ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ ತಾಲಿಬಾನ್!