ಪಾಲಕ್ಕಾಡ್( ಕೇರಳ): ಅಟ್ಟಪ್ಪಾಡಿಯ ಬುಡಕಟ್ಟು ಸಮುದಾಯಗಳಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಸಂಭವಿಸುವ ಸಾವುಗಳು ಮುಂದುವರಿದಿದ್ದು, ಅಪೌಷ್ಟಿಕತೆಯಿಂದಾಗಿ ಇಂದು ಮತ್ತೊಂದು ನವಜಾತ ಶಿಶು ಸಾವನ್ನಪ್ಪಿದೆ. ಒಂದು ವರ್ಷದ ಅವಧಿಯಲ್ಲಿ ಅಟ್ಟಪ್ಪಾಡಿಯಲ್ಲಿ ಅಪೌಷ್ಟಿಕತೆಯಿಂದ ಮಗು ಸಾವನ್ನಪ್ಪಿದ ನಾಲ್ಕನೇ ಪ್ರಕರಣ ಇದು.
ಶೋಲಯೂರಿನ ಸುತ್ತಕುಲಂ ಬುಡಕಟ್ಟು ನಿವಾಸಿಗಳಾದ ಬಾಬುರಾಜ್ ಮತ್ತು ಪವಿತ್ರಾ ದಂಪತಿಯ ಆರು ದಿನಗಳ ಗಂಡು ಮಗು ಗುರುವಾರ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದೆ. ಕೊಟ್ಟತಾರ ಆಸ್ಪತ್ರೆಯಲ್ಲಿ ಜನಿಸಿದ ಈ ಮಗು ಜನನದ ಸಮಯದಲ್ಲಿ ಕೇವಲ 715 ಗ್ರಾಂ ತೂಕವಿತ್ತು.
ಮಗು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ತೂಕದಿಂದ ಬಳಲುತ್ತಿದ್ದು, ಕೊಟ್ಟತಾರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಮಗುವಿನ ಸ್ಥಿತಿ ತೀರಾ ಹದಗೆಟ್ಟಾಗ, ಅದನ್ನು ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಮಗು ಗುರುವಾರ ಮುಂಜಾನೆ ಮೃತಪಟ್ಟಿದೆ.