ನವದೆಹಲಿ: 1992ರ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ. ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ಪೀಠವು, ಪ್ರಕರಣದ ಸಮಸ್ಯೆ ಈಗ ಉಳಿದಿಲ್ಲ ಎಂದು ನವೆಂಬರ್ 2019ರ ಸಂವಿಧಾನ ಪೀಠದ ತೀರ್ಪು ಉಲ್ಲೇಖಿಸಿ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು 2019ರ ನವೆಂಬರ್ 9ರಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಾಗವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ ಐತಿಹಾಸಿಕ ತೀರ್ಪಿನೊಂದಿಗೆ ದಶಕಗಳ ವಿವಾದಕ್ಕೆ ಅಂತ್ಯ ಹಾಡಿತ್ತು.
ಇಂದು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುವಾಗ ಈ ವಿಷಯವು ಮೊದಲೇ ವಿಚಾರಣೆಗೆ ಬರಬೇಕಿತ್ತು ಎಂಬುವುದನ್ನೂ ನ್ಯಾಯ ಪೀಠವು ಗಮನಿಸಿತು. ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ವಿಕ್ರಂ ನಾಥ್ ಅವರನ್ನೊಳಗೊಂಡ ನ್ಯಾಯ ಪೀಠ ಮುಂದೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, "ನ್ಯಾಯಾಂಗ ನಿಂದನೆ ಅರ್ಜಿಯು ದೀರ್ಘ ಕಾಲದಿಂದ ಬಾಕಿ ಉಳಿದಿದ್ದು, ಅರ್ಜಿದಾರರು 2010ರಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣವು ಈಗಾಗಲೇ ಸುಮಾರು 30 ವರ್ಷಗಳು ಕಳೆದಿವೆ ಮತ್ತು ಅರ್ಜಿದಾರರು ಈ ವಿಷಯದ ಪಟ್ಟಿಗಾಗಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ" ಎಂದು ಹೇಳಿದರು.