ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿರುವ ನಡುವೆ, ಯುನೈಟೆಡ್ ಕಿಂಗ್ಡಮ್ (ಯುಕೆ) ಮತ್ತು ಕೆನಡಾ ಮೂಲದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಕಾರ್ಯಕರ್ತರು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ತನ್ನ ಕಾರ್ಯಕರ್ತರಿಗೆ ಧನಸಹಾಯ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ.
ಸಿಖ್ ಆರ್ಗನೈಸೇಶನ್ ಫಾರ್ ಪ್ರಿಸನರ್ ವೆಲ್ಫೇರ್ (ಎಸ್ಒಪಿಡಬ್ಲ್ಯೂ), ಅಖಂಡ ಕೀರ್ತನೀ ಜಟ್ಟಾ (ಎಕೆಜೆ) ಮತ್ತು ಖಾಲ್ಸಾ ಏಡ್ ಸೇರಿದಂತೆ ಬಿಕೆಐನ ಮುಂಚೂಣಿ ಸಂಘಟನೆಗಳು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಹಣಕಾಸು ನೆರವು ನೀಡುತ್ತಿವೆ ಎಂದು ಸಂಸ್ಥೆ ಹೇಳಿದೆ. ಭಾರತ ಅನೇಕ ಬಾರಿ ಯುಕೆ ಮತ್ತು ಕೆನಡಾದ ಅಧಿಕಾರಿಗಳೊಂದಿಗೆ ಬಿಕೆಐ ಭಯೋತ್ಪಾದಕರಿಗೆ ಧನಸಹಾಯ ನೀಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿತ್ತು.
ವಾಧ್ವಾ ಸಿಂಗ್, ಜಗ್ತಾರ್ ಸಿಂಗ್ ತಾರಾ ಸೇರಿದಂತೆ ಪಾಕಿಸ್ತಾನ ಮೂಲದ ಬಿಕೆಐ ನಾಯಕರಿಂದ ಭಾರತೀಯ ಭಯೋತ್ಪಾದಕರು ಬೆಂಬಲವನ್ನು ಪಡೆಯುತ್ತಿದ್ದಾರೆ. ಬಿಕೆಐ ನಿಷೇಧಿತ ಖಲಿಸ್ತಾನಿ ಪರ ಭಯೋತ್ಪಾದಕ ಸಂಘಟನೆಯಾಗಿದೆ. ಇತ್ತೀಚಿಗೆ ಎನ್ಐಎ ನಡೆಸಿದ ತನಿಖೆಯ ಪ್ರಕಾರ, ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಬಿಕೆಐ ಹೊಸ ಸ್ಲೀಪರ್ ಸೆಲ್ಗಳನ್ನು ನೇಮಕ ಮಾಡಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.
ಇದಲ್ಲದೇ, ಇಂಗ್ಲೆಂಡ್ ಮತ್ತು ಕೆನಡಾದಿಂದ ಕಳುಹಿಸಲಾದ ಹಣವನ್ನು ಸ್ಲೀಪರ್ ಸೆಲ್ ಸದಸ್ಯರಿಗೆ ಮತ್ತು ಜೈಲಿನಲ್ಲಿರುವ ಭಯೋತ್ಪಾದಕರಿಗೆ ವಿತರಿಸಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ ಎಂದು ಎನ್ಐಎ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ. ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ನಿಜ್ಜರ್ನನ್ನು ಅಪರಿಚಿತರು ಹತ್ಯೆ ಮಾಡಿದ್ದರು. ಇತನ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಭಾರತೀಯ ಏಜೆಂಟರುಗಳು ಈ ಹತ್ಯೆಯ ಹಿಂದೆ ಇದ್ದಾರೆ ಎಂದು ಕೆನಡಾ ಆರೋಪಿಸಿತ್ತು.
ಭದ್ರತಾ ಸಂಸ್ಥೆಯ ಮಾಹಿತಿಯ ಪ್ರಕಾರ, ಬಿಕೆಐ ತನ್ನ ಪ್ರಮುಖ ಸದಸ್ಯರು ಮತ್ತು ಕಾರ್ಯನಿರ್ವಾಹಕರನ್ನು ವಿದೇಶಕ್ಕೆ, ವಿಶೇಷವಾಗಿ ಭಾರತಕ್ಕೆ ಸ್ಥಳಾಂತರಿಸಲು ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ಖಲಿಸ್ತಾನಿ ಪರವಾದ ಕೆಲಸ ಮಾಡುತ್ತಿದೆ. ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸರ ಗುಪ್ತಚರ ಪ್ರಧಾನ ಕಚೇರಿಯ ಮೇಲೆ ಆರ್ಪಿಜಿ ಭಯೋತ್ಪಾದಕ ದಾಳಿ, ತಾರ್ನ್ ತರನ್ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಯ ಮೇಲೆ ಆರ್ಪಿಜಿ ದಾಳಿ. ಅಪರಾಧ ತನಿಖಾ ಸಂಸ್ಥೆಯ ಮೇಲೆ ಐಇಡಿ ಸ್ಫೋಟ ಸೇರಿದಂತೆ ಪ್ರಮುಖ ಭದ್ರತಾ ಸ್ಥಾಪನೆಗಳನ್ನು ಬಿಕೆಐ ಸದಸ್ಯರು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಎನ್‌ಐಎ ಈ ಹಿಂದೆ ಚಾರ್ಜ್ ಶೀಟ್‌ನಲ್ಲಿ ಹೇಳಿತ್ತು.
ಬಿಕೆಐ ತಮ್ಮ ಕಾರ್ಯಾಚರಣೆಗಳನ್ನು ನಿರ್ವಹಿಸಲು ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಅಪರಾಧಿಗಳನ್ನು ನೇಮಿಸಿಕೊಂಡಿತ್ತು. ಪ್ರಸ್ತುತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಬಿಕೆಐ ಮುಖ್ಯಸ್ಥ ವಾಧ್ವಾ ಸಿಂಗ್ ಬಬ್ಬರ್ ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ) ಯೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಎನ್ಐಎ ಹೇಳಿದೆ. ಬಿಕೆಐ ಸಹಚರರಾದ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಮತ್ತು ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡ್ಗೆ ಕುರಿತ ಮಾಹಿತಿಗಾಗಿ ಎನ್ಐಎ ಬಹುಮಾನವನ್ನು ಘೋಷಿಸಿದೆ.
ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿದ ಪುರಾವೆಗಳ ಪ್ರಕಾರ, ಬಿಕೆಐ ಭಾರತೀಯ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ತಿಳಿಸಿದೆ. ಯಾವಾಗಲೂ ಇತರ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡುವ ಬಿಕೆಐ, ಭಾರತವನ್ನು ಹೊರತುಪಡಿಸಿ, ಪಾಕಿಸ್ತಾನ, ಉತ್ತರ ಅಮೆರಿಕ, ಯುರೋಪ್ ಮತ್ತು ಸ್ಕ್ಯಾಂಡಿನೇವಿಯಾದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದೆ. ಯುಎಸ್, ಕೆನಡಾ, ಯುಕೆ, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್ನಲ್ಲಿಯೂ ಬಿಕೆಐ ಸಕ್ರಿಯವಾಗಿದೆ.
ಇದನ್ನೂ ಓದಿ:ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ