ಹಲ್ದ್ವಾನಿ(ಉತ್ತರಾಖಂಡ):ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಅಲ್ಮೋರಾ ರಸ್ತೆಯಲ್ಲಿರುವ ಕೈಂಚಿ ಧಾಮ್ ದೇವಸ್ಥಾನ, ಆಶ್ರಮ ವಿಶ್ವಪ್ರಸಿದ್ಧವಾಗಿದ್ದು ಇಂದು ಸಂಸ್ಥಾಪನಾ ದಿನವನ್ನು ಆಚರಿಸಲಾಗಿದೆ. ಆಶ್ರಮದ ಸಂಸ್ಥಾಪಕ ಬಾಬಾ ನೀಮ್ ಕರೋಲಿ ಮಹಾರಾಜ್ರನ್ನು ದೇವರ ಅವತಾರ/ದೇವತಾ ಮನುಷ್ಯ ಎಂದು ಅವರ ಭಕ್ತರು ನಂಬುತ್ತಾರೆ. ಬಾಬಾರ ಮಹಿಮೆ ಭಾರತದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಸುದ್ದಿಯಾಗಿದ್ದು, ಆಶ್ರಮ ಅಪಾರ ಭಕ್ತ ಸಮೂಹ ಒಳಗೊಂಡಿದೆ.
ಕೈಂಚಿ ಧಾಮ್:ಕೈಂಚಿ ಧಾಮ್ ಎನ್ನುವುದು ಬಾಬಾ ನೀಮ್ ಕರೋಲಿ ಅವರ ಬೃಹತ್ ಆಶ್ರಮ. ದೇವಸ್ಥಾನ ಕೂಡಾ. ಹಲ್ದ್ವಾನಿಯಿಂದ 45 ಕಿ.ಮೀ ದೂರದಲ್ಲಿರುವ ಈ ಆಶ್ರಮವು ಪರ್ವತಗಳ ನಡುವೆ ಶಿಪ್ರಾ ನದಿ ತೀರದಲ್ಲಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್‌ಪುರ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಲಕ್ಷ್ಮಿ ನಾರಾಯಣ ಶರ್ಮಾ (ಬಾಬಾ ನೀಮ್ ಕರೋಲಿ) ಅವರು ನೀಮ್ ಕರೌಲಿ ಎಂಬ ಗ್ರಾಮದಲ್ಲಿ ಕಠಿಣ ತಪಸ್ಸು ಮಾಡಿದ್ದಾರೆ. ನಂತರ ಆಶ್ರಮಗಳನ್ನು ಸ್ಥಾಪಿಸಿದ್ದಾರೆ. ಮೊದಲ ಆಶ್ರಮ ಕೈಂಚಿ ಧಾಮ್ ಅನ್ನು ನೈನಿತಾಲ್ ಜಿಲ್ಲೆಯಲ್ಲಿ ನಿರ್ಮಿಸಿದರೆ ಎರಡನೆಯದು ವೃಂದಾವನ ಮಥುರಾದಲ್ಲಿದೆ. ಇವಲ್ಲದೇ ಇನ್ನೂ ಅನೇಕ ಚಿಕ್ಕ ಆಶ್ರಮಗಳಿವೆ.
ಬಾಬಾ ನೀಮ್ ಕರೌಲಿ ಮಹಾರಾಜ್ ಅವರನ್ನು 20ನೇ ಶತಮಾನದ ಶ್ರೇಷ್ಠ ಸಂತರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇವರು 1961ರಲ್ಲಿ ಮೊದಲ ಬಾರಿಗೆ ನೈನಿತಾಲ್ ತಲುಪಿ 1964ರಲ್ಲಿ ಕೈಂಚಿ ಧಾಮ್ ಆಶ್ರಮವನ್ನು(ದೇವಸ್ಥಾನ) ಸ್ಥಾಪಿಸಿದರು. ಇಂದು ಈ ಆಶ್ರಮ ದೇಶ ವಿದೇಶಗಳ ಭಕ್ತರ ನಂಬಿಕೆಯ ಕೇಂದ್ರವಾಗಿದೆ.
ಪವಾಡಗಳು:ಬಾಬಾ ನೀಮ್ ಕರೌಲಿ ಮಹಾರಾಜರ ಪವಾಡಗಳು ಇಂದಿಗೂ ಚರ್ಚೆಯಾಗುವ ವಿಷಯ. ಒಮ್ಮೆ ಆಶ್ರಮದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆ ವೇಳೆ ತುಪ್ಪದ ಕೊರತೆ ಎದುರಾಗಿ, ಬಾಬಾರವರ ಆದೇಶದ ಮೇರೆಗೆ ಆಶ್ರಮದ ಕೆಳಗೆ ಹರಿಯುವ ನದಿಯ ನೀರನ್ನು ಬಳಸಲಾಯಿತು. ಪ್ರಸಾದಕ್ಕೆ ಯಾವ ನೀರು ಹಾಕಿದರೂ ಅದು ತುಪ್ಪದ ರೂಪ ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬಾಬಾ ಅವರಲ್ಲಿ ದೈವಿಕ ಶಕ್ತಿಗಳಿದ್ದವು ಎಂದು ನಂಬಲಾಗಿದೆ. ಅಷ್ಟೇ ಅಲ್ಲದೇ ಬಾಬಾ ನಡೆಯುವಾಗ ಎಲ್ಲೆಂದರಲ್ಲಿ ಕಣ್ಮರೆಯಾಗುತ್ತಿದ್ದರು. ಅವರ ಭಕ್ತರು ಈ ಪವಾಡವನ್ನು ಹಲವು ಬಾರಿ ನೋಡಿ ಬೆರಗಾಗಿದ್ದಾರಂತೆ.
ಸ್ಟೀವ್ ಜಾಬ್ಸ್ ಅದೃಷ್ಟ: ಸುಪ್ರಸಿದ್ಧ ಆ್ಯಪಲ್ ಕಂಪನಿ ಸಂಸ್ಥಾಪಕ, ದಿವಂಗತ ಸ್ಟೀವ್ ಜಾಬ್ಸ್ ಅವರ ಅದೃಷ್ಟವೂ ಕೂಡ ಬಾಬಾ ಅವರ ಆಶೀರ್ವಾದದಿಂದಲೇ ಎಂದು ಹೇಳಲಾಗುತ್ತದೆ. ಸ್ಟೀವ್ ಜಾಬ್ಸ್ ವ್ಯವಹಾರದಲ್ಲಿ ಹಿನ್ನೆಡೆಯಾದಾಗ ಯಾರೋ ಓರ್ವರು ಬಾಬಾ ನೀಮ್ ಕರೌಲಿ ಮಹಾರಾಜರ ಬಗ್ಗೆ ಹೇಳಿದ್ದಾರೆ. ಸ್ಟೀವ್ ಜಾಬ್ಸ್ ಈ ಬಾಬಾರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬೆನ್ನಲ್ಲೇ ಅವರ ಅದೃಷ್ಟ ಖುಲಾಯಿಸಿತಂತೆ. ಬಾಬಾ ಅವರು ಸೇಬುಗಳನ್ನು ತಿನ್ನಲು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಸ್ಟೀವ್ ಜಾಬ್ಸ್ ತಮ್ಮ ಕಂಪನಿಯ ಹೆಸರನ್ನು ಆಪಲ್ ಎಂದು ಹೆಸರಿಸಿದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಹುಲಿಗಳ ಹಿಂಡಿನ ಮಧ್ಯೆ ಶ್ವಾನದ ರಾಜಾರೋಷ ಹೇಗಿದೆ ನೋಡಿ!
ಬಾಬಾ ನೀಮ್ ಕರೌಲಿ ಮಹಾರಾಜರು 1973ರಲ್ಲಿ ನಿಧನರಾಗಿದ್ದು, ವೃಂದಾವನದಲ್ಲಿ ಸಮಾಧಿ ಮಾಡಲಾಗಿದೆ. ಪ್ರತಿ ವರ್ಷ ಜೂನ್ 15ರಂದು (ಆಶ್ರಮದ ಸಂಸ್ಥಾಪನಾ ದಿನ) ಬಾಬಾರ ಧಾಮದಲ್ಲಿ ಬೃಹತ್ ಭಂಡಾರವನ್ನು(ಊಟದ ವ್ಯವಸ್ಥೆ) ಆಯೋಜಿಸಲಾಗುತ್ತದೆ. ಇಲ್ಲಿ ಯಾರು ಬಾಬಾರನ್ನು ಭಕ್ತಿಯಿಂದ ಸ್ಮರಿಸುತ್ತಾರೋ ಅವರ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ನಂಬಿಕೆ.