ಅಹಮದಾಬಾದ್ (ಗುಜರಾತ್):ನಿರಂತರ ವಿವಾದಗಳಿಂದ ಸುದ್ದಿಯಲ್ಲಿರುವ ಮಧ್ಯಪ್ರದೇಶದ ಬಾಗೇಶ್ವರ ಧಾಮದ ಬಾಬಾ ಬಾಗೇಶ್ವರ ಧೀರೇಂದ್ರ ಶಾಸ್ತ್ರಿ ಮೇ 26ರಿಂದ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದ ಪ್ರಮುಖ ನಗರಗಳಾದ ಸೂರತ್, ಅಹಮದಾಬಾದ್ ಮತ್ತು ರಾಜ್‌ಕೋಟ್‌ನಲ್ಲಿ ಧೀರೇಂದ್ರ ಶಾಸ್ತ್ರಿಗಳ ದಿವ್ಯ ದರ್ಬಾರ್ ನಡೆಯಲಿದ್ದು, ಅದಕ್ಕಾಗಿ ಎಲ್ಲ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ.
26 ಮತ್ತು 27ರಂದು ಸೂರತ್ ನಗರದ ಲಿಂಬಾಯತ್ ಪ್ರದೇಶದ ನೀಲಗಿರಿ ಮೈದಾನದಲ್ಲಿ ಧೀರೇಂದ್ರ ಶಾಸ್ತ್ರಿಯವರ ದಿವ್ಯ ದರ್ಬಾರ್ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಹಲವು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೇ, ಧೀರೇಂದ್ರ ಶಾಸ್ತ್ರಿ ರೋಡ್ ಶೋ ಕೂಡ ನಡೆಸಲಿದ್ದಾರೆ ಎಂಬ ಮಾತುಗಳು ಅನುಯಾಯಿಗಳು ನಡುವೆ ಕೇಳಿ ಬರುತ್ತಿವೆ. ಧೀರೇಂದ್ರ ಶಾಸ್ತ್ರಿಗಳ ಈ ದಿವ್ಯ ದರ್ಬಾರ್ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ವಿಶೇಷ ಎಂದರೆ ಈ ಕಾರ್ಯಕ್ರಮಕ್ಕಾಗಿ ಸೂರತ್ ನಗರದ ಬಿಜೆಪಿ ಮುಖಂಡರು ಪೂರ್ವ ಸಿದ್ಧತೆ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸೂರತ್ ಬಳಿಕ ಮೇ 29 ಮತ್ತು 30ರಂದು ಅಹಮದಾಬಾದ್‌ನಲ್ಲಿ ದಿವ್ಯ ದರ್ಬಾರ್ ನಡೆಯಲಿದೆ.
ಅಹಮದಾಬಾದ್‌ನಲ್ಲಿ ಮೊದಲ ಬಾರಿಗೆ ಧೀರೇಂದ್ರ ಶಾಸ್ತ್ರಿಯವರ ದಿವ್ಯ ದರ್ಬಾರ್ ಆಯೋಜಿಸಲಾಗುತ್ತಿದೆ. ಎರಡು ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಿಸಿಲಿನ ಬೇಗೆಯಿಂದಾಗಿ ಈ ಬಾರಿ ಇಡೀ ದರ್ಬಾರ್ ಸಂಜೆ 5ರಿಂದ ರಾತ್ರಿ 11ರವರೆಗೆ ನಡೆಯಲಿದೆ. ಧರ್ಮ, ಕರ್ಮ, ಜ್ಞಾನ, ಭಕ್ತಿ ಮತ್ತು ಸನಾತನ ಧರ್ಮದ ಪ್ರಚಾರದ ದೃಷ್ಟಿಯಿಂದ ಈ ದರ್ಬಾರ್ ನಡೆಯಲಿದೆ ಎಂದು ರಾಧಿಕಾ ಸೇವಾ ಸಮಿತಿ ಸದಸ್ಯ ಆಚಾರ್ಯ ಪ್ರಮೋದ್ ಮಹಾರಾಜ್ ತಿಳಿಸಿದ್ದಾರೆ.