ಘಾಜಿಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಜಂಗಢ ಸಂಸದ ದಿನೇಶ್ ಲಾಲ್ ಯಾದವ್ ನಿರಾಹುವಾ ನಿವಾಸದ ಬಳಿ ಹೋಳಿ ಆಚರಣೆ ಮಾಡುತ್ತಿದ್ದಾಗ ಗಲಾಟೆ ಉಂಟಾಗಿ ದಲಿತ ಯವಕರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಘಟನೆಯನ್ನು ಖಂಡಿಸಿ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಘಾಜಿಪುರ ಜಿಲ್ಲೆಯ ತಾಂಡ್ವಾ ಗ್ರಾಮದಲ್ಲಿ ಸಂಸದ ದಿನೇಶ್ ಲಾಲ್ ಮನೆ ಇದೆ. ಬುಧವಾರ ಇಡೀ ಗ್ರಾಮದಲ್ಲಿ ಜನರು ಉತ್ಸಾಹದಿಂದ ಹೋಳಿ ಆಚರಿಸುತ್ತಿದ್ದರು. ಅಲ್ಲದೇ, ಸಂಸದರ ನಿವಾದ ಮುಂದೆ ಸ್ಥಳೀಯರು ನೆರೆದು ಹಬ್ಬದಾಟದಲ್ಲಿ ತೊಡಗಿದ್ದರು. ಇಲ್ಲಿಯೇ ಕೆಲ ದಲಿತ ಯುವಕರು ಕೂಡ ರಂಗೀನಾಟದಲ್ಲಿ ಭಾಗವಹಿಸಿದ್ದರು. ಈ ವೇಳೆ, ಸಂಸದರ ಸಹೋದರನೊಂದಿಗೆ ವಾಗ್ವಾದ ನಡೆಸಿದ್ದು, ಅದು ವಿಕೋಪಕ್ಕೆ ತಿರುಗಿ ಮಾರಾಮಾರಿಯಲ್ಲಿ ಅಂತ್ಯಗೊಂಡಿದೆ ಎಂದು ವರದಿಯಾಗಿದೆ.
ದಲಿತ ಯುವಕರ ಮೇಲೆ ಹಲ್ಲೆ ಖಂಡಿಸಿ ಸಂಸದ ದಿನೇಶ್ ಲಾಲ್ ಮನೆ ಮುಂದೆ ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರದಿಂದಲೇ ಪ್ರತಿಭಟನೆ ಕುಳಿತಿದ್ದಾರೆ. ಹೋಳಿ ಆಚರಣೆ ವೇಳೆ ದಿನೇಶ್ ಲಾಲ್ ಅವರ ಸಹೋದರ ಮತ್ತು ಸ್ನೇಹಿತರು ಸೇರಿಕೊಂಡು ನಿವಾಸದ ಹೊರಗೆ ದಲಿತ ಯುವಕರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನಂತರ ಈ ವಾಗ್ವಾದವು ವಿಕೋಪಕ್ಕೆ ತಿರುಗಿ ಸಂಸದ ದಿನೇಶ್ ಲಾಲ್ ಅವರ ಸಹೋದರ ಕೆಲ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮ ಹಲ್ಲೆಗೆ ಒಳಗಾದ ಯುವಕರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಈ ಯುವಕನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆತನ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಲ್ಲಿಂದ ವಿಶೇಷ ಚಿಕಿತ್ಸೆಗಾಗಿ ವಾರಣಾಸಿಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಭೀಮ್ ಆರ್ಮಿ ಸದಸ್ಯರು ತಿಳಿಸಿದ್ದಾರೆ.