ಶಬರಿಮಲೆ (ಕೇರಳ): ದೇವಾಲಯಗಳಲ್ಲಿ ದೇವರಿಗೆ ನೈವೇದ್ಯ, ಪೂಜೆ ಸಲ್ಲಿಸಬೇಕಾದರೆ ದೇವಸ್ಥಾನಕ್ಕೇ ಹೋಗಬೇಕೆಂದಿಲ್ಲ. ಈಗ ಮನೆಯಲ್ಲೇ ಕುಳಿತು ದೇವರಿಗೆ ಸಲ್ಲಿಸುವಂತಹ ತಂತ್ರಜ್ಞಾನಗಳು ಬೆಳೆದಿವೆ. ಆ ತಂತ್ರಜ್ಞಾನವನ್ನು ಹಲವು ದೇವಾಲಯಗಳು ಕೂಡ ಅಳವಡಿಸಿಕೊಂಡಿವೆ ಕೂಡ. ಅದರಂತೆಯೇ ಇನ್ಮುಂದೆ ಅಯ್ಯಪ್ಪ ಸ್ವಾಮಿಯ ಭಕ್ತರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಯ್ಯಪ್ಪ ಸ್ವಾಮಿಗೆ ನೈವೇದ್ಯ ಸಲ್ಲಿಸಬಹುದು.
ಶಬರಿಮಲೆಯ ಅಯ್ಯಪ್ಪನಿಗೆ ಭಕ್ತರು ಕಾಣಿಕೆ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿಯು ಇ-ಕಾಣಿಕಾ (ಇ-ಕಾಣಿಕೆ) ಸೌಲಭ್ಯವನ್ನು ಸ್ಥಾಪಿಸಿದೆ. www.sabarimalaonline.org ವೆಬ್‌ಸೈಟ್‌ನಲ್ಲಿ ಹೊಸ ಅವಕಾಶವನ್ನು ಭಕ್ತರಿಗಾಗಿ ತೆರೆದಿದೆ. ಆ ವೆಬ್‌ಸೈಟ್ ಮೂಲಕ ಭಕ್ತರು ಕಾಣಿಕೆ ಸಲ್ಲಿಸಬಹುದು. ದೇವಸ್ವಂ ಮಂಡಳಿ ಅಧ್ಯಕ್ಷ ಅಡ್ವ ಕೆ. ಅನಂತ ಗೋಪನ್ ಇ-ಕಾಣಿಕಾ (ಇ-ಕಾಣಿಕೆ) ವ್ಯವಸ್ಥೆಯನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕರಿಂದ ಅರ್ಪಣೆ ಸ್ವೀಕರಿಸುವ ಮೂಲಕ ನೆರವೇರಿಸಲಾಯಿತು.
ಇ-ಕಾಣಿಕಾ (ಇ-ಕಾಣಿಕೆ) ವ್ಯವಸ್ಥೆ ಜಾರಿಯಿಂದ ಅಯ್ಯಪ್ಪನ ಭಕ್ತರು ಜಗತ್ತಿನ ಯಾವುದೇ ಮೂಲೆಯಿಂದ ಬೇಕಾದರೂ ನೈವೇದ್ಯ ಸಲ್ಲಿಸಬಹುದಾಗಿದೆ. ಈ ಮೂಲಕ ಕಾಣಿಕೆ ರೂಪದಲ್ಲಿ ಆದಾಯದಲ್ಲಿ ಭಾರಿ ಏರಿಕೆಯಾಗುವ ನಿರೀಕ್ಷೆಯನ್ನು ದೇವಸ್ವಂ ಮಂಡಳಿಯೂ ಹೊಂದಿದೆ. ಏತನ್ಮಧ್ಯೆ, ಈ ತಿಂಗಳ ಪೂಜೆಗಳಿಗಾಗಿ ಶಬರಿಮಲೆ ದೇವಸ್ಥಾನವನ್ನು ಜೂನ್ 15 ರಂದು ಸಂಜೆ 5 ಗಂಟೆಗೆ ತೆರೆಯಲಾಗುತ್ತದೆ. 16 ರಿಂದ 20ರವರೆಗೆ ಐದು ದಿನಗಳ ಕಾಲ ಸನ್ನಿಧಾನದಲ್ಲಿ ವಿಶೇಷ ಪೂಜೆಗಳು ಜರುಗಲಿವೆ.