ಅಯೋಧ್ಯಾ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಸ್ವಾಗತಕ್ಕೆ ಅಯೋಧ್ಯೆ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.
ಭೇಟಿಗೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, "ನಮ್ಮ ಸರ್ಕಾರವು ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿ, ಸಂಪರ್ಕ ಸುಧಾರಣೆ ಮತ್ತು ಭಗವಾನ್ ಶ್ರೀರಾಮನ ನಗರ ಅಯೋಧ್ಯೆಯ ಶ್ರೀಮಂತ ಪರಂಪರೆಯ ಸಂರಕ್ಷಣೆಗೆ ದೃಢ ಸಂಕಲ್ಪ ಹೊಂದಿದೆ. ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲು ನಿಲ್ದಾಣವನ್ನು ಇಂದು ನಾನು ಉದ್ಘಾಟಿಸುತ್ತೇನೆ. ನಾಳೆಯೂ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಸುಯೋಗ ನನಗೆ ಒದಗಿದೆ. ಇದರಿಂದ ಅಯೋಧ್ಯೆ ಮತ್ತು ಉತ್ತರಪ್ರದೇಶದಂತೆ ದೇಶದಲ್ಲಿನ ನನ್ನ ಕುಟುಂಬ ಸದಸ್ಯರ ಜೀವನವನ್ನು ಸುಲಲಿತಗೊಳಿಸಲಿದೆ'' ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ಅಯೋಧ್ಯೆ ಸಜ್ಜು
ರೈಲು ನಿಲ್ದಾಣ ಉದ್ಘಾಟನೆ: ದೆಹಲಿಯಿಂದ ವಿಮಾನದಲ್ಲಿ ಅಯೋಧ್ಯೆಗೆ ಆಗಮಿಸಲಿರುವ ಪ್ರಧಾನಿ, ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಅಯೋಧ್ಯಾ ಧಾಮ್ ರೈಲು ನಿಲ್ದಾಣಕ್ಕೆ ತಲುಪಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ನವೀಕರಣಗೊಂಡಿರುವ ಅಯೋಧ್ಯಾ ಧಾಮ್ ರೈಲು ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಎರಡು ಫ್ಲಾಟ್ಫಾರ್ಮ್ಗಳಿದ್ದ ರೈಲು ನಿಲ್ದಾಣದಲ್ಲೀಗ ಮೂರನೇ ಫ್ಲಾಟ್ಫಾರ್ಮ್ ನಿರ್ಮಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ಕಟ್ಟಡ ತಲೆಎತ್ತಿದೆ. ಈ ಕಟ್ಟಡದ ಉದ್ಘಾಟನೆ ಬಳಿಕ ಪ್ರಧಾನಿ, 2 ಹೊಸ ಅಮೃತ್ ಭಾರತ್ ಹಾಗೂ ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಹೊಸ ರಸ್ತೆಗಳ ಉದ್ಘಾಟನೆ: ಇದಲ್ಲದೆ, ಕೋಟ್ಯಾಂತರ ಮೌಲ್ಯದ ಯೋಜನೆಗಳ ಉದ್ಘಾಟನೆ, ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನೆರವೇರಿಸುವರು. 2183 ಕೋಟಿ ರೂ ವೆಚ್ಚದ ಗ್ರೀನ್ ಫೀಲ್ಡ್ ಟೌನ್ಶಿಪ್ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ನಂತರ ನವೀಕರಣಗೊಂಡಿರುವ ನಯಾಘಾಟ್ನಿಂದ ಲಕ್ಷ್ಮಣ ಘಾಟ್ವರೆಗೆ ನಿರ್ಮಾಣಗೊಂಡಿರುವ ದೀಪೋತ್ಸವ ಸ್ಥಳ, ಪ್ರವಾಸಿಗರಪಥವಾದ ರಾಮ್ ಕಿ ಪೌಡಿನಿಂದ ರಾಜ್ಘಾಟ್, ರಾಜ್ಘಾಟ್ನಿಂದ ರಾಮಮಂದಿರ ರಸ್ತೆ ಸೇರಿ ಅಯೋಧ್ಯೆಯಲ್ಲಿ 4 ಹೊಸ ರಸ್ತೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮ ಜನ್ಮಭೂಮಿ ಪಥ ಜೊತೆಗೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಲಖನೌ- ಅಯೋಧ್ಯೆ ಹೈವೇ, ಅಯೋಧ್ಯೆ ಬೈಪಾಸ್, ವಾರಾಣಸಿ ಬೈಪಾಸ್, ಖುತಾರ್-ಲಖೀಂಪುರ ಹೈವೇಗಳನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ಅಯೋಧ್ಯೆ ಸಜ್ಜು
ಮಹರ್ಷಿ ವಾಲ್ಮಿಕಿ ವಿಮಾನ ನಿಲ್ದಾಣ ಲೋಕಾರ್ಪಣೆ: ಅಲ್ಲಿಂದ ಮತ್ತೆ ಮಹರ್ಷಿ ವಾಲ್ಮಿಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಮೋದಿ, ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೆ, ಸುಮಾರು 15 ಕಿಲೋ ಮೀಟರ್ ರೋಡ್ ಶೋನಲ್ಲಿ ಮೋದಿ ಭಾಗವಹಿಸಲಿದ್ದಾರೆ. ಧರ್ಮಪಥ್, ಲತಾ ಮಂಗೇಶ್ಕರ್ ಚೌಕ್, ತುಳಸಿ ಉದ್ಯಾನ್, ಶಾಸ್ತ್ರಿ ನಗರ, ಹನುಮಾನ್ಗಢ ಚೌಕ್, ದಾಂತ್ ಧವನ್ ಕುಂಡ್, ಶ್ರೀ ರಾಮ ಆಸ್ಪತ್ರೆ, ರಾಮನಗರ ತೆಹ್ರಿ ಬಜಾರ್ ಮೂಲಕ ಮೋದಿ ರೋಡ್ ಶೋ ನಡೆಸಲಿದ್ದಾರೆ.
ಸಾರ್ವಜನಿಕ ಸಭೆ: ವಿಮಾನ ನಿಲ್ದಾಣದ ಉದ್ಘಾಟನೆ ಬಳಿಕ, ಏರ್ಪೋರ್ಟ್ ಬಳಿಯ ಮೈದಾನದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸಾರ್ವಜನಿಕ ಸಭೆ, ಅಯೋಧ್ಯೆ ಭಾಗಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಸಭೆಯಯನ್ನು ಯಶಸ್ವಿಗೊಳಿಸಲು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕಳೆದ 4 ದಿನಗಳಿಂದ ಅಯೋಧ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮಕ್ಕಾಗಿ ದೊಡ್ಡ ಮಟ್ಟದಲ್ಲಿ ಜನರನ್ನು ಕರೆತರುವ ಜವಾಬ್ದಾರಿಯನ್ನು ಪಕ್ಷದ ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿದೆ. ಈ ಹಿಂದೆ 2020ರ ಆಗಸ್ಟ್ 5 ರಂದು ಅಯೋಧ್ಯೆಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
ಪ್ರಧಾನಿ ಮೋದಿ ಸ್ವಾಗತಕ್ಕೆ ಅಯೋಧ್ಯೆ ಸಜ್ಜು
ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 3 ರಿಂದ 4 ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಇರುತ್ತಾರೆ. ಈಗಾಗಲೇ ಮೋದಿ ಆಗಮನ ಹಾಗೂ ನಿರ್ಗಮನ ಹಾಗೂ ಕಾರ್ಯಕ್ರಮಗಳ ಅವಧಿ ನಿಗದಿಯಾಗಿದೆ. ಆದರೆ ಕಳೆದ ಎರಡು ದಿನಗಳಿಂದ ಅಯೋಧ್ಯೆಯ ವಾತಾವರಣ ತುಂಬಾ ಹದಗೆಟ್ಟಿದೆ. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಅಯೋಧ್ಯೆಯಲ್ಲಿ ದಟ್ಟ ಮಂಜಿನ ಹೊದಿಕೆ ಆವರಿಸಿಕೊಂಡಂತಿರುವ ವಾತಾವರಣ ಇದೆ. ಅಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯ ಮಹರ್ಷಿ ವಾಲ್ಮಿಕಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾಡಲು ಸಮಸ್ಯೆ ಉಂಟಾಗಬಹುದು ಎಂದು ಮೂಲಗಳು ತಿಳಿಸಿವೆ.
ಬಿಗಿ ಭದ್ರತೆ: ಅಯೋಧ್ಯೆಗೆ ಪ್ರಧಾನಿ ಭೇಟಿ ಹಿನ್ನೆಲೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ 3 ದಿನಗಳಿಂದ ಖುದ್ದಾಗಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಸಂಪೂರ್ಣ ಅಯೋಧ್ಯೆಗೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಹೈಟೆಕ್ ಡ್ರೋನ್, ತಂತ್ರಜ್ಞಾನ, ಪೊಲೀಸ್ ಪಡೆಗಳ ಮೂಲಕ ಹದ್ದಿನ ಕಣ್ಣಿಡಲಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಎಸ್ಪಿಜಿ, ಬಿಎಸ್ಎಫ್, ಎನ್ಎಸ್ಜಿ, ಯುಪಿ, ಎಟಿಎಸ್ ಮತ್ತು ಯುಪಿ ಪೊಲೀಸ್ ಸಿಬ್ಬಂದಿ ಹಾಗೂ ಸುಮಾರು 6000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ನಾಳೆ ಅಯೋಧ್ಯೆಗೆ ಮೋದಿ: ₹15,700 ಕೋಟಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ