ಅಯೋಧ್ಯಾ(ಉತ್ತರಪ್ರದೇಶ):ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಮಂದಿರ ನಿರ್ಮಾಣ ಕಾರ್ಯ ಈಗ ಯಾವ ಹಂತದಲ್ಲಿದೆ?, ಏನೇನು ಕಾರ್ಯಗಳು ಆಗಿವೆ, ಯಾವ ವೇಗದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ, ಯಾವಾಗ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎನ್ನುವುದರ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಆ. 5ರಂದು ಚಾಲನೆ:ಸನಾತನ ಧರ್ಮೀಯರ ನಂಬಿಕೆಯ ಕೇಂದ್ರ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಆ.5, 2020 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದರು. ಅಲ್ಲಿಂದ ಎರಡು ವರ್ಷಗಳಲ್ಲಿ(ಇಂದಿಗೆ) 40 ಪ್ರತಿಶತದಷ್ಟು ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ರಾಮ ಮಂದಿರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿ ಹೀಗಿದೆ.
ಮಂದಿರ ಒಡೆದವರು ಯಾರು?: ಇತಿಹಾಸಕಾರರ ಪ್ರಕಾರ, 1528ರಲ್ಲಿ ದೇವಾಲಯವನ್ನು ಕೆಡವಲಾಯಿತು. ಮೊದಲ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿದ ಬಾಬರ್ ರಾಮ ಜನ್ಮಭೂಮಿಯಲ್ಲಿ ಮಸೀದಿ ನಿರ್ಮಿಸಿ ಅದಕ್ಕೆ ಬಾಬರಿ ಮಸೀದಿ ಎಂದು ಹೆಸರಿಸಲಾಯಿತು. ಮಸೀದಿ ನಿರ್ಮಾಣವಾದ ಸುಮಾರು 300 ವರ್ಷಗಳ ನಂತರ 1813ರಲ್ಲಿ ಮೊದಲ ಬಾರಿಗೆ ಹಿಂದೂ ಸಂಘಟನೆಗಳು ಬಾಬರಿ ಮಸೀದಿಯ ಮೇಲೆ ಹಕ್ಕು ಸಾಧಿಸಿದವು.
ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. 72 ವರ್ಷಗಳ ನಂತರ, ಈ ವಿಷಯ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿತು. 134 ವರ್ಷಗಳ ಕಾಲ ಈ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು 3 ನ್ಯಾಯಾಲಯಗಳಲ್ಲಿ ಆಲಿಸಿದ ನಂತರ ಈ ಪ್ರಕರಣವನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲಾಯಿತು.
ವಿವಾದಿತ ಕಟ್ಟಡ ಕೆಡವಿದ್ದು ಹೇಗೆ?:ಅಯೋಧ್ಯೆಯ ರಾಮಜನ್ಮ ಭೂಮಿಯ ಮೇಲಿನ ಮಂದಿರದ ಹಕ್ಕಿನ ಕುರಿತು ಹಿಂದೂ ಸಂಘಟನೆಗಳು ನಿರಂತರವಾಗಿ ಉದ್ರೇಕಗೊಳ್ಳುತ್ತಿದ್ದರು. 1934ರಲ್ಲಿ ಈ ವಿಷಯದ ಮೇಲೆ ಗಲಭೆಗಳು ಭುಗಿಲೆದ್ದವು ಮತ್ತು ಮುಸ್ಲಿಂ ಕಡೆಯವರು ಬಾಬರಿ ಮಸೀದಿ ಎಂದು ಕರೆಯುತ್ತಿದ್ದ ವಿವಾದಿತ ಕಟ್ಟಡದ ಕೆಲವು ಭಾಗವನ್ನು ಕೆಡವಲಾಯಿತು.
1949ರಲ್ಲಿ, ಮಸೀದಿಯ ಆಕಾರದಲ್ಲಿ ಭಗವಾನ್ ರಾಮಲಾಲಾ ಅವರ ಪ್ರತಿಮೆಗಳು ಈ ರಚನೆಯೊಳಗೆ ಕಾಣಿಸಿಕೊಂಡವು. ಆದರೆ, ಹಿಂದೂಗಳು ರಾಮಲಾಲಾ ವಿಗ್ರಹಗಳನ್ನು ಮಸೀದಿಯೊಳಗೆ ತಂದಿದ್ದಾರೆ ಎಂದು ಮುಸ್ಲಿಂ ಕಡೆಯವರು ಆರೋಪಿಸಿದರು. ಈ ಘಟನೆಯ ಕೇವಲ 7 ದಿನಗಳ ನಂತರ ಫೈಜಾಬಾದ್ ನ್ಯಾಯಾಲಯ ಸಂಪೂರ್ಣ ಸಂಕೀರ್ಣವನ್ನು ವಿವಾದಿತ ಭೂಮಿ ಎಂದು ಘೋಷಿಸಿ ಅದರ ಬಾಗಿಲಿಗೆ ಬೀಗ ಹಾಕಿತು.
ಈ ಘಟನೆಯ ಒಂದು ವರ್ಷದ ನಂತರ, ಹಿಂದೂ ಮಹಾಸಭಾದ ವಕೀಲ ಗೋಪಾಲ್ ವಿಚಾರಕ್ ಅವರು ರಾಮಲಾಲ ವಿಗ್ರಹಗಳನ್ನು ಪೂಜಿಸುವ ಹಕ್ಕನ್ನು ಕೋರಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಇದರ ಮುಂದುವರಿದ ಭಾಗವಾಗಿ 1959ರಲ್ಲಿ, ನಿರ್ಮೋಹಿ ಅಖಾರಾ(ಹಿಂದೂ ಧಾರ್ಮಿಕ ಗುಂಪು) ವಿವಾದಿತ ಪ್ರದೇಶದ ಮಾಲೀಕತ್ವದ ಬಗ್ಗೆ ಮತ್ತೊಂದು ಪ್ರಕರಣ ದಾಖಲಿಸಿತು.
1961ರಲ್ಲಿ ಸುನ್ನಿ ವಕ್ಫ್ ಮಂಡಳಿ ವಿವಾದಿತ ಪ್ರದೇಶದಲ್ಲಿ ಪ್ರತಿಮೆಯನ್ನು ಸ್ಥಾಪಿಸುವುದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು ಮತ್ತು ಮಸೀದಿ ಮತ್ತು ಸುತ್ತಮುತ್ತಲಿನ ಭೂಮಿಯ ಮೇಲೆ ತನ್ನ ಹಕ್ಕನ್ನು ವ್ಯಕ್ತಪಡಿಸಿತು. 1986ರಲ್ಲಿ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರಯತ್ನದಿಂದ ಫೈಜಾಬಾದ್ ನ್ಯಾಯಾಲಯ ಬಾಬರಿ ಮಸೀದಿಯ ಬೀಗವನ್ನು ತೆರೆಯಲು ಆದೇಶ ಹೊರಡಿಸಿತು.
ದೇಶವ್ಯಾಪಿ ಗಲಭೆ:1987ರಲ್ಲಿ ಈ ಸಂಪೂರ್ಣ ಪ್ರಕರಣ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಕಾನೂನು ಹೋರಾಟದ ನಡುವೆಯೇ 1992ರ ಡಿಸೆಂಬರ್ 6ರಂದು ಇಡೀ ದೇಶದಲ್ಲಿ ಗಲಭೆಯ ಕಿಡಿ ವ್ಯಾಪಿಸಿತು. ಈ ನಡುವೆ, ಹಿಂದೂವಾದಿ ಸಂಘಟನೆಗಳು ವಿವಾದಿತ ಕಟ್ಟಡವನ್ನು ನೆಲಕ್ಕೆ ಕೆಡವಿದರು.
ರಾಮ ಮಂದಿರದ ಮೇಲಿನ ಹಕ್ಕುಗಳನ್ನು ಸಕ್ರಿಯವಾಗಿ ಪ್ರತಿಪಾದಿಸಲು 1949 ರಿಂದ ಪ್ರಾರಂಭವಾದ ಕಾನೂನು ಹೋರಾಟ ವರ್ಷದಿಂದ ವರ್ಷಕ್ಕೆ ಮುಂದುವರೆಯಿತು. ಈ ಸಂದರ್ಭದಲ್ಲಿ, ವಿವಾದಿತ ಪ್ರದೇಶದಲ್ಲಿ ತಮ್ಮ ಹಕ್ಕು ಮಂಡಿಸಿದ ಇನ್ನೂ ಅನೇಕ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಮೊಕದ್ದಮೆ ಹೂಡಿದವು. ಅಂತಿಮವಾಗಿ 1992ರಲ್ಲಿ ಕಟ್ಟಡವನ್ನು ಉರುಳಿಸಲಾಯಿತು.
3 ಸಮಾನ ಭಾಗಗಳಾಗಿ ವಿಂಗಡಿಸಲು ಆದೇಶ: 2010ರಲ್ಲಿ, ಅಲಹಾಬಾದ್ ಹೈಕೋರ್ಟ್ ಈ ವಿಷಯದ ಬಗ್ಗೆ ತೀರ್ಪು ನೀಡುವಾಗ ವಿವಾದಿತ ಸ್ಥಳವನ್ನು ಸುನ್ನಿ ವಕ್ಫ್ ಬೋರ್ಡ್, ರಾಮಲಾಲಾ ವಿರಾಜಮಾನ್ ಮತ್ತು ನಿರ್ಮೋಹಿ ಅಖಾರಾ ನಡುವೆ ಮೂರು ಸಮಾನ ಭಾಗಗಳಾಗಿ ವಿಂಗಡಿಸಲು ಆದೇಶ ನೀಡಿತು. ಆದರೆ, ಮುಸ್ಲಿಂ ಕಡೆಯವರು ಈ ನಿರ್ಧಾರದಿಂದ ತೃಪ್ತರಾಗಲಿಲ್ಲ. ಬದಲಿಗೆ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದರು.
2011ರಲ್ಲಿ ಅಯೋಧ್ಯೆ ವಿವಾದದ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿತು. ಆಗ ಮತ್ತೊಮ್ಮೆ ಇಡೀ ಪ್ರಕರಣದ ವಿಚಾರಣೆ ಪ್ರಾರಂಭವಾಯಿತು. ಏತನ್ಮಧ್ಯೆ 2017 ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಕರೆ ನೀಡಿತ್ತು. ಆದರೆ, ವಿಷಯವು ಕಾರ್ಯರೂಪಕ್ಕೆ ಬರಲಿಲ್ಲ.