ನವದೆಹಲಿ:ಕೋವಿಡ್ ಮೂರನೇ ಅಲೆಯ ಭೀತಿ ಎಲ್ಲರನ್ನೂ ಕಾಡುತ್ತಿದೆ. ಕೊರೊನಾ ವೈರಸ್ ರೂಪಾಂತರವಾದ ಡೆಲ್ಟಾ ವೇರಿಯಂಟ್ನಲ್ಲೇ ಕಾಣಿಸಿಕೊಂಡಿರುವ ಮತ್ತೊಂದು 'ಉಪ ರೂಪಾಂತರ' ಆತಂಕ ಹೆಚ್ಚಿಸುತ್ತಿದ್ದು, ವಿಜ್ಞಾನಿಗಳು ಮತ್ತು ತಜ್ಞರಿಗೆ ಮತ್ತೊಂದು ಸವಾಲಾಗಿದೆ.
ಭಾರತದ SARS-CoV2-Genomic Consortia (INSACOG) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಷ್ಟೇನೂ ಭಯಪಡುವ ಅಗತ್ಯವಿಲ್ಲ. ದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಈ ಕೋವಿಡ್ ವೇರಿಯಂಟ್ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.
ಡೆಲ್ಟಾ ವೈರಸ್ನ ಮರು ರೂಪಾಂತರವಾದ ವೈರಸ್ ಅನ್ನು ಎವೈ.4.2(AY.4.2) ಎಂದು ಹೆಸರಿಸಲಾಗಿದೆ. ಈಗಾಗಲೇ ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು ರಷ್ಯಾದಲ್ಲಿ ಈ ರೂಪಾಂತರಿಗಳು ಪತ್ತೆಯಾಗಿವೆ. ಭಾರತದಲ್ಲೂ ಕೂಡಾ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಮಹಾರಾಷ್ಟ್ರ ಇತರ ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ.
ಹೊಸ ರೂಪಾಂತರಿ ವೈರಸ್ ಪತ್ತೆಯಾದ ಬೆನ್ನಲ್ಲೇ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಈ ವೈರಸ್ ಬಗ್ಗೆ ಜಾಗರೂಕತೆಯಿಂದಿರಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
'ಆತಂಕಪಡುವ ಅಗತ್ಯವಿಲ್ಲ'
ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕದಲ್ಲಿ 2, ತೆಲಂಗಾಣದಲ್ಲಿ 2, ಜಮ್ಮು- ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಡೆಲ್ಟಾ ರೂಪಾಂತರಿಯ ಉಪ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈ ವೈರಸ್ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.
ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಕ್ಷಮತೆ ಇದ್ದರೂ, ಹೆಚ್ಚು ಮಾರಣಾಂತಿಕವಾದಂತೆ ಕಾಣುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ವಿಜ್ಞಾನಿ ಡಾ.ಲೋಕೇಶ್ ಮಾಹಿತಿ ನೀಡಿದ್ದಾರೆ. ಐಸಿಎಂಆರ್ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಸದಸ್ಯರನ್ನು ಒಳಗೊಂಡ ತಂಡವು ಎವೈ.4.2 ವೈರಸ್ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿರುವ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ನಿರ್ದೇಶಕ ಡಾ.ಅನುರಾಗ್ ಅಗರವಾಲ್, ಈಗಿನ ವರದಿಗಳನ್ನು ಪರಿಶೀಲಿಸಿದರೆ ಎವೈ.4.2 ರೂಪಾಂತರ ವೈರಸ್ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಯಾಕೆ ಹೀಗೆ?:
ಆಂಧ್ರಪ್ರದೇಶದಲ್ಲಿ ಏಳು ಮಂದಿ ಎವೈ.4.2 ಕೋವಿಡ್ ವೈರಸ್ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಗಳಿವೆ. ದೇಶದ ಇತರೆಡೆಯಲ್ಲೂ ಕಾಣಿಸಿಕೊಂಡಿದ್ದು, ಅಷ್ಟೇನೂ ಮಾರಣಾಂತಿಕವಾಗಿಲ್ಲ. ಆದರೆ ಇದೇ ವೈರಸ್ ಇಂಗ್ಲೆಂಡ್, ರಷ್ಯಾ ಮತ್ತು ಚೀನಾದಲ್ಲಿ ಸಾಕಷ್ಟು ಸಾವುನೋವುಗಳಿಗೆ ಕಾರಣವಾಗಿದೆ ಎಂದು ಏಷ್ಯನ್ ಸೊಸೈಟಿ ಆಫ್ ಎಮರ್ಜೆನ್ಸಿ ಮೆಡಿಸಿನ್ ಅಧ್ಯಕ್ಷ ಡಾ.ಟಾಮೋರಿಶ್ ಕೋಲೆ ಹೇಳಿದ್ದಾರೆ. ಈ ಬಗ್ಗೆ ಸೂಕ್ತ ಸಂಶೋಧನೆ ನಡೆಯುವವರೆಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅತ್ಯಂತ ಅನಿವಾರ್ಯ ಎಂದು ಟಾಮೋರಿಶ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಸೂಪರ್ ಸ್ಟಾರ್ ರಜಿನಿಕಾಂತ್ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು