ಕರ್ನಾಟಕ

karnataka

ETV Bharat / bharat

ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಿ, ಹಬ್ಬದ ಸೀಸನ್​ನಲ್ಲಿ ಜನದಟ್ಟಣೆ ತಪ್ಪಿಸಿ: ರಾಜ್ಯಗಳಿಗೆ ಕೇಂದ್ರದ ಸಲಹೆ - ರಾಜ್ಯಗಳಿಗೆ ಕೇಂದ್ರದ ಸಲಹೆ

ಕೋವಿಡ್​ ಪಾಸಿಟಿವ್​ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್​ ಟೆಸ್ಟ್​ ಮಾಡಿಸಬೇಕು. ಇದರಿಂದ ದೇಶದಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

avoid-overcrowding-ensure-wearing-of-masks-in-crowded-places-centre-to-states-ahead-of-festive-season
ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಿ, ಹಬ್ಬದ ಸೀಸನ್​ನಲ್ಲಿ ಜನದಟ್ಟಣೆ ತಪ್ಪಿಸಿ: ರಾಜ್ಯಗಳಿಗೆ ಕೇಂದ್ರದ ಸಲಹೆ

By

Published : Dec 23, 2022, 10:45 PM IST

ನವದೆಹಲಿ: ಕೋವಿಡ್​ ಭೀತಿಯ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭ ಮತ್ತು ಅದರ ಮುಂಚಿತವಾಗಿ ಜನದಟ್ಟಣೆ ತಪ್ಪಿಸಬೇಕು. ಜನನಿಬಿಡ ಸ್ಥಳಗಳು ಮತ್ತು ಯಾವುದೇ ಒಳಾಂಗಣ ಕೂಟಗಳಲ್ಲಿ ಸಾರ್ವಜನಿಕರು ಮಾಸ್ಕ್​ ಧರಿಸುವುದನ್ನು ಖಾತ್ರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಇಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

ಈ ಬಗ್ಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಜಿಲ್ಲಾವಾರು ಇನ್ಫ್ಲುಯೆಂಜ ತರಹದ ಅನಾರೋಗ್ಯ (ಇಲಿ - ILI ) ಮತ್ತು ತೀವ್ರತರ ಉಸಿರಾಟದ ಕಾಯಿಲೆ (ಸಾರಿ -SARI) ಪ್ರಕರಣಗಳ ಮೇಲ್ವಿಚಾರಣೆ ಮಾಡಬೇಕು. ಇಂತಹ ಪ್ರಕರಣಗಳನ್ನು ನಿಯಮಿತವಾಗಿ ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕೆಂದು ಒತ್ತಿ ಹೇಳಿದ್ದಾರೆ.

ಅಲ್ಲದೇ, ಇಂತಹ ಪ್ರಕರಣಗಳನ್ನು ಕೋವಿಡ್​ ಪರೀಕ್ಷೆಗೂ ಒಳಪಡಿಸಬಹುದು. ಕೋವಿಡ್​ ಪಾಸಿಟಿವ್​ ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್​ ಟೆಸ್ಟ್​ ಮಾಡಿಸಬೇಕು. ಇದರಿಂದ ದೇಶದಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖವಾಗಿ, ಮುಂಬರುವ ಹಬ್ಬ-ಹರಿದಿನಗಳು ಮತ್ತು ಹೊಸ ವರ್ಷದ ಆಚರಣೆಗಳ ಮೇಲೆ ನಿಗಾ ವಹಿಸಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯದ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಸೋಂಕು ಹರಡುವಿಕೆ ಮತ್ತು ಹೆಚ್ಚಳದ ಅಪಾಯವನ್ನು ಕಡಿಮೆ ಮಾಡಲು ಟೆಸ್ಟ್​-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನ್‌ ಬಗ್ಗೆ ಗಮನಕೊಡಬೇಕೆಂದು ತಿಳಿಸಿದ್ದಾರೆ.

ಎಲ್ಲ ಜಿಲ್ಲೆಗಳಲ್ಲೂ ಆರ್‌ಟಿ-ಪಿಸಿಆರ್ ಪರೀಕ್ಷೆಗಳು, ಹಾಸಿಗೆಗಳ ಲಭ್ಯತೆ, ಆರೋಗ್ಯ ಕಾರ್ಯಕರ್ತರ ಲಭ್ಯತೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಜನದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಸಂಘಟಕರು, ವ್ಯಾಪಾರ ಮಾಲೀಕರು, ಮಾರುಕಟ್ಟೆ ಸಂಘಗಳು ಮುಂತಾದ ಪಾಲುದಾರರೊಂದಿಗೆ ಚರ್ಚಿಸಬೇಕು. ಜೊತೆಗೆ, ಮಾಸ್ಕ್​ ಧರಿಸುವಿಕೆ, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದು ಕೇಂದ್ರ ನಿರ್ದೇಶನ ನೀಡಿದೆ.

ABOUT THE AUTHOR

...view details