ನವದೆಹಲಿ: ಹೆಚ್ಚಿನ ಸಂಖ್ಯೆಯ ವೈದ್ಯರಿಗೆ ಕೋವಿಡ್ ತಗುಲುತ್ತಿದೆ ಎಂಬ ವರದಿ ಬಂದಿದ್ದು, ಜನರು ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಮತ್ತು ಆನ್ಲೈನ್ ಅಥವಾ ದೂರಸಂಪರ್ಕ ಸೇವೆಗಳ ಮೊರೆ ಹೋಗಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
"ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ರೂಪಾಂತರದ ನಡುವೆ ದೇಶಾದ್ಯಂತದ ಆಸ್ಪತ್ರೆಗಳಲ್ಲಿನ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ವೈದ್ಯರು ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರೆಗಳಿಗೆ ಭೇಟಿ ನೀಡಿ, ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಬರುವುದನ್ನು ಆದಷ್ಟು ತಪ್ಪಿಸಿ. ಸಣ್ಣಪುಟ್ಟ ಸಮಸ್ಯೆಗಳನ್ನು ದೂರಸಂಪರ್ಕ ಸೇವೆಗಳಿಂದ ಬಗೆಹರಿಸಿಕೊಳ್ಳಿ" ಎಂದು ಏಷ್ಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್ (ASEM) ಅಧ್ಯಕ್ಷ ಡಾ ತಮೋರಿಶ್ ಕೋಲೆ ಹೇಳಿದ್ದಾರೆ.
ದೆಹಲಿಯ ಏಮ್ಸ್ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯ ಅನೇಕ ವೈದ್ಯರು, ಬಿಹಾರದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 100 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ, ತಮಿಳುನಾಡಿನ 60ಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಕೋಲ್ಕತ್ತಾದಲ್ಲಿ 200ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕಳೆದ ಕೆಲ ದಿನಗಳಲ್ಲಿ ವೈರಸ್ ಅಂಟಿದೆ ಎಂದು ವರದಿಯಾಗಿದೆ.