ನವದೆಹಲಿ: ವಿಮಾನಯಾನ ಉದ್ಯಮವು ಕಳೆದ ಮೂರು ವರ್ಷಗಳಲ್ಲಿ 28,907 ಕೋಟಿ ರೂಪಾಯಿ ನಷ್ಟ ಕಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಲೋಕಸಭೆಗೆ ತಿಳಿಸಿದೆ. 2019 ರಲ್ಲಿ 4,770 ಕೋಟಿ ರೂಪಾಯಿ, 2020 ರಲ್ಲಿ 12,479 ಕೋಟಿ ರೂಪಾಯಿ ಮತ್ತು 2021 ರಲ್ಲಿ 11,658 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ನಾಗರಿಕ ವಿಮಾನಯಾನ ಉದ್ಯಮಕ್ಕೆ ಉಂಟಾದ ನಷ್ಟದ ಕುರಿತು ಕಾಂಗ್ರೆಸ್ ಸಂಸದ ಅನುಮುಲಾ ರೇವಂತ್ ರೆಡ್ಡಿ ಅವರ ಪ್ರಶ್ನೆಗೆ ಲಿಖಿತ ಉತ್ತರದ ಮೂಲಕ ಉತ್ತರಿಸಿದ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯಸಚಿವ ಜನರಲ್ ಡಾ.ವಿ.ಕೆ.ಸಿಂಗ್ (ನಿವೃತ್ತ) ಈ ವಿವರ ಕೊಟ್ಟರು.
ದೇಶದಲ್ಲಿ ವಿಮಾನಯಾನ ಉದ್ಯಮದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಇದೇ ರೀತಿಯ ವಿಶ್ಲೇಷಣೆಯನ್ನು ನಡೆಸಲು ಸರ್ಕಾರವು ಯಾವುದೇ ಸಮಯವನ್ನು ನಿಗದಿಪಡಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿಂಗ್, ವಿಮಾನಯಾನ ಸಂಸ್ಥೆಗಳನ್ನು ಖಾಸಗಿ ನಿರ್ವಾಹಕರು ನಡೆಸುತ್ತಾರೆ ಮತ್ತು ಸರ್ಕಾರವು ವಿಮಾನಯಾನ ದರಗಳನ್ನು ನಿಯಂತ್ರಣ ಮುಕ್ತಗೊಳಿಸಿದೆ. ಹಾಗಾಗಿ, ಸರ್ಕಾರವು ವಿಮಾನಯಾನ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ವಿಶ್ಲೇಷಿಸುವುದಿಲ್ಲ ಎಂದರು.
ವಿಮಾನಯಾನ ಉದ್ಯಮದ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಸರ್ಕಾರವು ಕೈಗೊಂಡ ಉಪಕ್ರಮಗಳ ಕುರಿತು ಮಾಹಿತಿ ನೀಡಿದ ಸಚಿವ ಸಿಂಗ್, ಏವಿಯೇಷನ್ ಟರ್ಬೈನ್ ಇಂಧನ (ATF) ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಲಡಾಖ್, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮತ್ತು ಇತರೆ ಸೇರಿದಂತೆ 17 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಕಡಿಮೆಗೊಳಿಸಿವೆ ಎಂದು ಹೇಳಿದರು.