ಕೊಚ್ಚಿ (ಕೇರಳ): ಕೇರಳ ದೇವರ ಸ್ವಂತ ನಾಡು ಎಂದು ಪ್ರಸಿದ್ಧಿ ಪಡೆದಿದೆ. ನೂರಾರು ಇತಿಹಾಸ ಪ್ರಸಿದ್ಧ ತೀರ್ಥ ಕ್ಷೇತ್ರಗಳು ಇಲ್ಲಿವೆ. ಅಪಾರ ಸಂಖ್ಯೆಯಲ್ಲಿ ದೇಶ ವಿವಿಧೆಡೆಯಿಂದ ಇಲ್ಲಿನ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. ಈ ದೇವಾಲಯಗಳು ಇಂದಿಗೂ ತನ್ನ ನಂಬಿಕೆ, ವಿಶಿಷ್ಟ ಆಚರಣೆಗಳನ್ನು ಉಳಿಸಿಕೊಂಡು ಬಂದಿದೆ. ಕೇರಳದ ಕೊಚ್ಚಿಯ ಅತಿ ಪ್ರಾಚೀನ ಆವನಂಕೋಡ್ ಸರಸ್ವತಿ ದೇವಾಲಯ ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ. ಈ ದೇವಾಲಯವನ್ನು ಪಾಸ್ಪೋರ್ಟ್ ದೇವಾಲಯ ಎಂದು ಕರೆಯಲಾಗುತ್ತದೆ.
ಇಲ್ಲಿನ ನಡುಂಬಸ್ಸೇರಿ ವಿಮಾನ ನಿಲ್ದಾಣದ ಬಳಿ ಇರುವ ಆವನಂಕೋಡ್ ಸರಸ್ವತಿ ದೇವಾಲಯಕ್ಕೆ ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ಭೇಟಿ ವಿಶೇಷ ಪೂಜೆಗಳನ್ನು ಕೈಗೊಳ್ಳುತ್ತಾರೆ. ಸರಸ್ವತಿಯು ವಿದ್ಯಾದೇವತೆ ಆಗಿರುವುದರಿಂದ ಇಲ್ಲಿ ಮಕ್ಕಳಿಗೆ ವಿದ್ಯಾರಂಭವನ್ನು ಮಾಡಿಸಲಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ಸಂದರ್ಭಗಳಲ್ಲಿ ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಗುತ್ತದೆ. ಆದರೆ ಈ ದೇವಾಲಯದಲ್ಲಿ ಎಲ್ಲಾ ದಿನಗಳಲ್ಲಿ ವಿದ್ಯಾರಂಭ ಮಾಡಲಾಗುತ್ತದೆ.
ಪಾಸ್ಪೋರ್ಟ್ ದೇವಾಲಯ :ಈ ದೇವಾಲಯವು ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವುದರಿಂದ ನೂರಾರು ಜನ ವಿಮಾನದಲ್ಲಿ ಪ್ರಯಾಣಿಸುವವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿಹೋಗುತ್ತಾರೆ. ವಿದೇಶಗಳಿಗೆ ತೆರಳುವವರು ಮೊದಲು ಇಲ್ಲಿಗೆ ಆಗಮಿಸಿ ತಮ್ಮ ಪಾಸ್ಪೋರ್ಟ್ಗೆ ಪೂಜೆ ಸಲ್ಲಿಸಿದ ಬಳಿಕ ತೆರಳುತ್ತಾರೆ. ಇಲ್ಲಿ ಪೂಜೆ ಸಲ್ಲಿಸಿ ವಿದೇಶಕ್ಕೆ ತೆರಳಿದರೆ ಜೀವನದಲ್ಲಿ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇವರದ್ದಾಗಿದೆ. ಇದರಿಂದಾಗಿ ಆವನಂಕೋಡ್ ಸರಸ್ವತಿ ದೇವಾಲಯವು ಪಾಸ್ಪೋರ್ಟ್ ದೇವಾಲಯ ಎಂದು ಖ್ಯಾತಿ ಪಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಕ್ಷೇತ್ರ ಸೇವಾ ಟ್ರಸ್ಟ್ ಖಜಾಂಜಿ ಸಜೀಶ್ ಕೆ ಆರ್ ಮಾತನಾಡಿ, ಆವನಂಕೋಡ್ ಸರಸ್ವತಿ ದೇವಾಲಯಕ್ಕೆ ವಿದೇಶಿ ಪ್ರವಾಸಿಗರು ಸಹ ಆಗಮಿಸಿ ವಿಶೇಷ ಪೂಜೆಯನ್ನು ಕೈಗೊಳ್ಳುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಇಲ್ಲಿ ವಿದ್ಯಾರಂಭ ಮಾಡಿಸುತ್ತಾರೆ. ಆದಿ ಶಂಕರಾಚಾರ್ಯರು ಇದೇ ದೇವಾಲಯದಲ್ಲಿ ವಿದ್ಯಾರಂಭ ಮಾಡಿದ್ದರು ಎಂದು ಹೇಳಲಾಗಿದೆ. ಪ್ರತಿನಿತ್ಯ ವಿದ್ಯಾರಂಭ ಸೇವೆ ನಡೆಸುವ ಕೆಲವೇ ಕೆಲವು ದೇವಾಲಯಗಳಲ್ಲಿ ಈ ಆವನಂಕೋಡ್ ಸರಸ್ವತಿ ದೇವಾಲಯವೂ ಒಂದು ಎಂದು ಹೇಳಿದ್ದಾರೆ.