ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಲಂಡನ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಉಭಯ ಸದನಗಳನ್ನು ಮುಂದೂಡಿದ ನಂತರ ಸಂಸತ್ತಿನ ಹೊರಗಿನ ವಿಜಯ್ ಚೌಕ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮೋದಿ ಜಿ ಅಡಿಯಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವವಿಲ್ಲ. ಅವರು ದೇಶವನ್ನು ಸರ್ವಾಧಿಕಾರ ರೀತಿಯಲ್ಲಿ ನಡೆಸುತ್ತಿದ್ದಾರೆ ಮತ್ತು ಅವರೇ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದರು.
ಪ್ರಜಾಪ್ರಭುತ್ವವನ್ನು ಹತ್ತಿಕ್ಕುವವರು ಮತ್ತು ಅದನ್ನು ನಾಶ ಮಾಡುತ್ತಿರುವವರು ಅದನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅದಾನಿ ವಿಷಯದ ಕುರಿತು ಮಾತನಾಡಿದ ಖರ್ಗೆ, ನಾವು ಅದಾನಿ ಷೇರುಗಳ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ಒತ್ತಾಯಿಸುತ್ತಿದ್ದೇವೆ. ನಾವು ಈ ವಿಷಯವನ್ನು ಪ್ರಸ್ತಾಪಿಸಿದಾಗ ಮೈಕ್‌ಗಳು ಸ್ವಿಚ್ ಆಫ್ ಆಗುತ್ತವೆ ಮತ್ತು ಸದನದಲ್ಲಿ ಗದ್ದಲ ಉಂಟಾಗುತ್ತದೆ. ಆದರೆ, ಪ್ರತಿಪಕ್ಷಗಳು ಒಟ್ಟಾಗಿವೆ ಮತ್ತು ಅದಾನಿ ವಿಷಯದ ಬಗ್ಗೆ ಜೆಪಿಸಿ ಬೇಡಿಕೆಯನ್ನು ಮುಂದುವರಿಸಲಿವೆ ಎಂದು ಅವರು ಹೇಳಿದರು.
ಸಂಸತ್ತಿನ ಎರಡನೇ ಹಂತದ ಬಜೆಟ್ ಅಧಿವೇಶನವು ಇಂದು ಗದ್ದಲದೊಂದಿಗೆಯೇ ಆರಂಭವಾಯಿತು. ಬಿಜೆಪಿ ಮತ್ತು ಪ್ರತಿಪಕ್ಷ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು. ವಿದೇಶದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗಾಗಿ ಬಿಜೆಪಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿತು. ಇನ್ನು ಪ್ರತಿಪಕ್ಷ ಸದಸ್ಯರು ಸರ್ಕಾರವು ಸರ್ವಾಧಿಕಾರಿ ರೀತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು. ವಾದ - ವಿವಾದಗಳು ತಣ್ಣಗಾಗದ ಕಾರಣದಿಂದ ಸಂಸತ್ತಿನ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಲಾಯಿತು.