ಧರ್ಮಶಾಲ (ಹಿಮಾಚಲ ಪ್ರದೇಶ):ಆಸ್ಟ್ರೀಯಾದ ದೇಶದ ಪ್ಯಾರಾಗ್ಲೈಡರ್ ಪೈಲಟ್ ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಸಿಲುಕಿಕೊಂಡಿರುವ ಘಟನೆ ಹಿಮಾಚಲ ಪ್ರದೇಶದ ಧರ್ಮಶಾಲ ಸಮೀಪದ ತಥರ್ನಾದಲ್ಲಿ ನಡೆದಿದೆ. ಸುದ್ದಿ ತಿಳಿದ ತಕ್ಷಣ ಧರ್ಮಶಾಲ ಪೊಲೀಸರು ಮತ್ತು ಎಸ್ಡಿಆರ್ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡ ಆಸ್ಟ್ರೀಯಾದ ಪ್ಯಾರಾಗ್ಲೈಡರ್ ಪೈಲಟ್ ರೋಷ್ಮನ್ ಜೆರಾಲ್ಡ್ ಅವರನ್ನು ಸೋಮವಾರ ರಕ್ಷಿಸಿದ್ದಾರೆ.
ವಿಶ್ವವಿಖ್ಯಾತ ಪ್ಯಾರಾಗ್ಲೈಡಿಂಗ್ ತಾಣವಾದ ಬಿರ್ ಬಿಲ್ಲಿಂಗ್‌ನಿಂದ ಟೇಕ್ಆಫ್ ಆದ ರೋಷ್ಮನ್ ಪ್ಯಾರಾಗ್ಲೈಡಿಂಗ್ ಮಾಡುವಾಗ ನಿಯಂತ್ರಣ ಕಳೆದುಕೊಂಡು ಧರ್ಮಶಾಲ ಸಮೀಪದ ತಥರ್ನಾ ಎಂಬ ಪ್ರದೇಶದಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಮರಕ್ಕೆ ಸಿಲುಕಿಕೊಂಡಿದ್ದರು. ಪ್ಯಾರಾಗ್ಲೈಡರ್ ತಥರ್ನಾದಲ್ಲಿ ಮರದಲ್ಲಿ ಸಿಲುಕಿರುವ ಮಾಹಿತಿ ತಿಳಿದ ತಕ್ಷಣ, ಎಸ್ಎಚ್ಓ ಸುರೇಂದ್ರ ಠಾಕೂರ್ ನೇತೃತ್ವದಲ್ಲಿ ಧರ್ಮಶಾಲಾ ಪೊಲೀಸ್ ತಂಡ ಸ್ಥಳಕ್ಕೆ ತೆರಳಿದೆ. ಈ ಬಗ್ಗೆ ಎಸ್‌ಡಿಆರ್‌ಎಫ್‌ಗೂ ಮಾಹಿತಿ ನೀಡಲಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ, ಎಸ್ಡಿಆರ್ಎಫ್ ಸಿಬ್ಬಂದಿ ಮತ್ತು ಸ್ಥಳೀಯರ ಜಂಟಿ ಪ್ರಯತ್ನ ನಡೆಸಿ ಆಸ್ಟ್ರೀಯಾದ ಪ್ಯಾರಾಗ್ಲೈಡರ್ನನ್ನು ರಕ್ಷಿಸಿದರು. ರಕ್ಷಣೆಯ ನಂತರ, ಆಸ್ಟ್ರೀಯಾ ಪ್ಯಾರಾಗ್ಲೈಡರ್ ರೋಷ್ಮನ್ ಜೆರಾಲ್ಡ್ ತನ್ನ ಜೀವವನ್ನು ಉಳಿಸಿದಕ್ಕಾಗಿ ಧರ್ಮಶಾಲ ಪೊಲೀಸರಿಗೆ ಮತ್ತು ಸ್ಥಳೀಯ ಜನರಿಗೆ ಧನ್ಯವಾದ ಅರ್ಪಿಸಿದರು. ನಂತರ ಮಾತನಾಡಿದ ಅವರು ನಾನು ಮರಕ್ಕೆ ಸಿಕ್ಕಿಕೊಂಡ ತಕ್ಷಣವೇ ಪೊಲೀಸರು ಮತ್ತು ಜನರು ನನ್ನನ್ನು ತ್ವರಿತವಾಗಿ ರಕ್ಷಿಸಿದರು. ಇದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞರಾಗಿರುತ್ತೇನೆ. ಭಾರತದ ಜನ ತುಂಬಾ ಒಳ್ಳೆಯವರು ಮತ್ತು ಸಹಕಾರಿ ಎಂದು ರೋಷ್ಮನ್ ಜೇರಾಲ್ಡ್ ಹೇಳಿದರು.