ನವದೆಹಲಿ: ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ವಿವಾದ ಕುರಿತ ವಿಚಾರಣೆಯನ್ನು ವಾರಾಣಸಿಯ ಹಿರಿಯ ಸಿವಿಲ್ ನ್ಯಾಯಾಲಯದಿಂದ ಜಿಲ್ಲಾ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ವರ್ಗಾವಣೆ ಮಾಡಿದೆ. ಅಲ್ಲದೇ, ಇಲ್ಲಿ ದೊರೆತ ಶಿವಲಿಂಗಕ್ಕೆ ಭದ್ರತೆ ಮತ್ತು ಮುಸ್ಲಿಮರು ನಮಾಜ್ ಮಾಡಲು ಅವಕಾಶ ನೀಡಿದ್ದ ತನ್ನ ಮಧ್ಯಂತರ ಆದೇಶವನ್ನು ಸರ್ವೋಚ್ಛ ನ್ಯಾಯಾಲಯ ಮುಂದುವರಿಸಿದೆ.
ಹಿಂದೂ ಸಂಘಟನೆಗಳ ವಾದ:ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದು, ಜ್ಞಾನವಾಪಿ ಮಸೀದಿಯು ಮಸೀದಿಯೇ ಅಲ್ಲ. ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ಭೂಮಿಯನ್ನು ಹಸ್ತಾಂತರಿಸುವ ಕುರಿತು ಯಾವುದೇ ಮುಸ್ಲಿಮರು ಅಥವಾ ಮುಸ್ಲಿಮರ ಸಮಿತಿ ಅಥವಾ ವಕ್ಫ್ ರಚಿಸಲು ಆದೇಶ ನೀಡಿಲ್ಲ ಹೇಳಿವೆ.
1669ರ ಏಪ್ರಿಲ್ 9ರಂದು ಅಂದಿನ ಇಸ್ಲಾಮಿಕ್ ದೊರೆ ಔರಂಗಜೇಬ್ ವಾರಾಣಸಿಯಲ್ಲಿರುವ ಆದಿ ವಿಶೇಶ್ವರ ದೇವಾಲಯ ಕೆಡವಲು ನಿರ್ದೇಶಿಸಿ ಹೊರಡಿಸಿದೆ ಆದೇಶವನ್ನುಇತಿಹಾಸಕಾರರು ದೃಢಪಡಿಸಿದ್ದಾರೆ. ಆದರೆ, ಈ ಭೂಮಿ ಬಗ್ಗೆ ವಕ್ಫ್ ರಚಿಸಲು ಅಥವಾ ಯಾವುದೇ ಮುಸ್ಲಿಮರು ಅಥವಾ ಮುಸ್ಲಿಮರ ಸಮಿತಿಗೆ ಹಸ್ತಾಂತರಿಸುವ ಕುರಿತು ಯಾವುದೇ ದಾಖಲೆಗಳು ಇಲ್ಲ ಎಂದು ಪ್ರತಿವಾದಿಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ವಕ್ಫ್ಗೆ ಮೀಸಲಾದ ಭೂಮಿ ಮೇಲೆ ಮಾತ್ರವೇ ವಕ್ಫ್ ರಚಿಸಬಹುದು. ಆದರೆ, ಈ ಪ್ರಕರಣದಲ್ಲಿ ಹಾಗೆ ಆಗಿಲ್ಲ. ಆದ್ದರಿಂದ ಅನಾದಿ ಕಾಲದಿಂದಲೂ ಭೂಮಿ ಮತ್ತು ಆಸ್ತಿ ದೇವರಿಗೆ ಸೇರಿದೆ. ಇದರಿಂದ ಇಲ್ಲಿ ಮಸೀದಿ ಇರಬಾರದು ಎಂಬುದು ಸ್ಪಷ್ಟವಾಗಿದೆ ಎಂದು ವಾದ ಮಂಡಿಸಿದ್ದಾರೆ. ಅಲ್ಲದೇ, ಕಾಶಿಯು ಹಲವಾರು ದಾಳಿಗೆ ಗುರಿಯಾಗಿದೆ. ಆದಿ ವಿಶೇಶ್ವರನ ದೇವಾಲಯದ ಮೇಲೆ 1193ರಿಂದ 1669ರವರೆಗೆ ಅನೇಕ ಬಾರಿ ಆಕ್ರಮಣ ಮಾಡಲಾಗಿದೆ. ಅಲ್ಲದೇ, ಈ ದೇವಸ್ಥಾನ ಲೂಟಿ ಮಾಡಿ ಕೆಡವಲಾಯಿತು ಎಂದು ಪ್ರತಿಪಾದಿಸಿದ್ದಾರೆ.