ಹಸಿದವರ ಹೊಟ್ಟೆ ತುಂಬಿಸುತ್ತಿದೆ ಈ ರೊಟ್ಟಿ ಬ್ಯಾಂಕ್ ಔರಂಗಾಬಾದ್ (ಮಹಾರಾಷ್ಟ್ರ): ಸಮಾಜದಲ್ಲಿ ಒಂದೊತ್ತಿನ ಊಟಕ್ಕಾಗಿ ಪರದಾಡುವ ಹಾಗೂ ಹಸಿವಿನ ಹೊಟ್ಟೆಯಲ್ಲೇ ಮಲಗುವ ಅಸಂಖ್ಯಾತ ಜನರು ನಮ್ಮ ನಡುವೆ ಇದ್ದಾರೆ. ಮತ್ತೊಂದೆಡೆ, ದೊಡ್ಡ ಸಭೆ, ಸಮಾರಂಭದಲ್ಲಿ ಸಾಕಷ್ಟು ಆಹಾರ ವ್ಯರ್ಥ ಮಾಡುವವರ ಸಂಖ್ಯೆಯೂ ದೊಡ್ಡಿದೆ. ಈ ಎರಡೂ ವರ್ಗಗಳನ್ನು ಗಮನದಲ್ಲಿಸಿಕೊಂಡು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ರೊಟ್ಟಿ ಬ್ಯಾಂಕ್ವೊಂದು ಕಾರ್ಯ ನಿರ್ವಹಿಸುತ್ತಿದೆ. ಇದು ಒಂದು ದಿನವೂ ಒಲೆ ಹಚ್ಚದೆಯೇ ಹಸಿದವರ ಹೊಟ್ಟೆ ತುಂಬಿಸುತ್ತಿದೆ.!
ಹೌದು, ಔರಂಗಾಬಾದ್ ನಗರದ ಗಂಜ್ ಶಹೀದನ್ ಮಸೀದಿ ಬಳಿ 9 ವರ್ಷಗಳಿಂದ ಬಡವರಿಗೆ ಈ ರೊಟ್ಟಿ ಬ್ಯಾಂಕ್ ಆಹಾರ ಒದಗಿಸುತ್ತಿದೆ. ಸೇವಾ ಟ್ರಸ್ಟ್ ಎಂಬ ಎನ್ಜಿಓ ಅಡಿ ಈ ರೊಟ್ಟಿ ಬ್ಯಾಂಕ್ಅನ್ನು ಯೂಸುಫ್ ಮಕಾಟಿ ಎಂಬುವರು ನಡೆಸುತ್ತಿದ್ದಾರೆ. ನಿತ್ಯ ನೂರಾರು ಜನರು ಇಲ್ಲಿ ಆಹಾರ ಪಡೆದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಈ ರೊಟ್ಟಿ ಬ್ಯಾಂಕ್ನವರಿಗೆ ಆಹಾರವನ್ನು ತಯಾರಿಸಲು ಒಂದೇ ಒಂದು ದಿನ ಕೂಡ ಒಲೆ ಹಚ್ಚುವ ಅಗತ್ಯ ಬಿದ್ದಿಲ್ಲ. ಏಕೆಂದರೆ, ಈ ಬ್ಯಾಂಕ್‌ಗೆ ಆಹಾರವು ಫಂಕ್ಷನ್ ಹಾಲ್‌ಗಳು ಮತ್ತು ಜನರ ಮನೆಗಳಿಂದಲೇ ಬರುತ್ತದೆ. ಅದು ಅಲ್ಲಿಂದ ಬಡವರಿಗೆ ತಲುಪುತ್ತದೆ. ತನ್ನ ಈ ಸೇವಾ ಕಾರ್ಯದಿಂದ ರೊಟ್ಟಿ ಬ್ಯಾಂಕ್‌ಗೆ ದೇಶಾದ್ಯಂತ ಅನೇಕ ಪ್ರಶಸ್ತಿಗಳು ಸಂದಿವೆ. ಪ್ರಧಾನಿ ಮೋದಿ ಕೂಡ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ರೊಟ್ಟಿ ಬ್ಯಾಂಕ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಔರಂಗಾಬಾದ್ ನಗರದಲ್ಲಿ ಪ್ರತಿದಿನ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಗಳ ನಂತರ, ಅಲ್ಲಿ ಉಳಿದ ಆಹಾರವನ್ನು ಎಸೆಯುವ ಬದಲು ಬಡವರಿಗೆ ಸೇವೆ ಮಾಡಲು ತೆಗೆದುಕೊಳ್ಳುತ್ತೇವೆ. ಹೀಗೆ ಈ ರೊಟ್ಟಿ ಬ್ಯಾಂಕ್ ಕೆಲಸ ಮಾಡಿ ಅನೇಕ ಬಡವರಿಗೆ ಅನ್ನ ನೀಡುತ್ತಿದೆ. ನಗರದಲ್ಲಿ ಈ ರೊಟ್ಟಿ ಬ್ಯಾಂಕ್‌ನ ನಾಲ್ಕು ಶಾಖೆಗಳಿವೆ. ಇವು ವರ್ಷದ 365 ದಿನಗಳು ಸಹ ಬಡ ಜನರಿಗೆ ಸಹಾಯ ಮಾಡುತ್ತವೆ. ನಗರದ ವಿವಿಧ ಕೊಳಚೆ ಪ್ರದೇಶಗಳು ಮತ್ತು ಆಸ್ಪತ್ರೆಗಳಲ್ಲಿನ ಬಡ ರೋಗಿಗಳಿಗೂ ಆಹಾರ ಒದಗಿಸುತ್ತೇವೆ ಎನ್ನುತ್ತಾರೆ ಯೂಸುಫ್ ಮಕಾಟಿ.
ಮುಂದುವರೆದು ಮಾತನಾಡಿದ ಅವರು, ಮದುವೆ ಸಮಾರಂಭಗಳ ಸಮಯದಲ್ಲಿ ಫಂಕ್ಷನ್ ಹಾಲ್‌ಗಳಿಂದ ಸಾಕಷ್ಟು ಆಹಾರ ಬರುತ್ತದೆ. ಇಂತಹ ಸಂದರ್ಭದಲ್ಲಿ ರೋಟಿ ಬ್ಯಾಂಕ್ಲ್ಲಿರುವ ನಾಲ್ಕು ಡೀಪ್ ಫ್ರೀಜರ್‌ಗಳು ಸಾಕಾಗುವುದಿಲ್ಲ. ಬ್ಯಾಂಕ್‌ನ ಮುಂದೆ ದೊಡ್ಡ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗಿದೆ. ಅದರಲ್ಲಿ ಆಹಾರ ಸಂರಕ್ಷಿಸಿ ನಂತರ ಬಡವರಿಗೆ ವಿತರಿಸಲಾಗುತ್ತದೆ. ಕಳೆದ ಒಂಬತ್ತು ವರ್ಷಗಳಲ್ಲಿ ತಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ, ರೋಟಿ ಬ್ಯಾಂಕ್‌ಗೆ ಆಹಾರ ಬರದೆ ಒಂದು ದಿನವೂ ಕಳೆದಿಲ್ಲ. ಪ್ರತಿ ನಗರದಲ್ಲಿ ಇಂತಹ ರೊಟ್ಟಿ ಬ್ಯಾಂಕ್ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಬಡವರಿಗೆ ದಿನಕ್ಕೆ ಎರಡೊತ್ತಿನ ಊಟ ಸಿಗುವಂತವಾಗಲಿದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ:ಆತಂಕದಲ್ಲಿ ಆಹಾರ ಭದ್ರತೆ: ಹೆಚ್ಚುತ್ತಿದೆ ಮಕ್ಕಳ ಅಪೌಷ್ಟಿಕತೆಯ ಬಿಕ್ಕಟ್ಟು.. ತುರ್ತು ಕ್ರಮ ಅಗತ್ಯ