ಮುಜಾಫರ್ಪುರ( ಬಿಹಾರ):ಎಂತಹ ಜನ ಇರ್ತಿರಾ ಅಂತೀರಾ.. ಇಲ್ಲಿಬ್ಬರು ಅಧಿಕಾರಿಗಳು ಪಂಚಾಯಿತಿ ಕಟ್ಟಟವನ್ನೇ ಮಾರಾಟ ಮಾಡಿದ್ದಾರೆ. ಅಷ್ಟಕ್ಕೂ ಇಂತಹದ್ದೊಂದು ಮಾರಾಟ ನಡೆದಿರುವುದು ಬಿಹಾರದಲ್ಲಿ. ರಾಜ್ಯದ ಕಂದಾಯ ಸಚಿವ ರಾಮ್‌ಸುರತ್ ರಾಯ್ ಅವರ ವಿಧಾನಸಭಾ ಕ್ಷೇತ್ರದಲ್ಲಿ ಅನ್ನೋದು ಇನ್ನೂ ಬೆಚ್ಚಿ ಬೀಳಿಸುವ ಸಂಗತಿ. ಇಲ್ಲಿ ಪಂಚಾಯತ್ ಭವನವನ್ನು ನೆಲಸಮ ಮಾಡಿ ಮಾರಾಟ ಮಾಡಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ವಾಸ್ತವವಾಗಿ, ಬಿಹಾರದ ಮುಜಾಫರ್‌ಪುರದ ಔರೈ ಬ್ಲಾಕ್‌ನಲ್ಲಿರುವ ಔರೈ ಪಂಚಾಯತ್ ಭವನವನ್ನು ಯಾವುದೇ ಸರ್ಕಾರಿ ಆದೇಶವಿಲ್ಲದೆ ಮಾರಾಟ ಮಾಡಲಾಗಿದೆ. ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯ ಕುಮ್ಮಕ್ಕಿನಿಂದ ಮಾರಾಟ ನಡೆದಿದೆ ಎನ್ನಲಾಗಿದೆ. ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಅದರಲ್ಲಿದ್ದ ಇಟ್ಟಿಗೆಗಳನ್ನ ಮಾರಾಟ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಂಚಾಯತ್ ರಾಜ್ ಇಲಾಖೆ ಆರೋಪಿತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದೆ.
ಪ್ರಕರಣ ದಾಖಲಿಸಿದ ಇಲಾಖೆ: ಪಂಚಾಯತ್ ಅಧಿಕಾರಿಗಳ ಈ ಕಳ್ಳಾಟ ಇದೀಗ ಬೆಳಕಿಗೆ ಬಂದಿದ್ದು, ಈ ಇಬ್ಬರ ಮೇಲೂ ಕೇಸ್ ಜಡಿಯಲಾಗಿದೆ. ಸರ್ಕಾರಿ ಆಸ್ತಿ ನಾಶ, ಹಣಕಾಸು ಅವ್ಯವಹಾರ ಹಾಗೂ ಹಿರಿಯ ಅಧಿಕಾರಿಗಳಿಂದ ಮಾಹಿತಿ ಮುಚ್ಚಿಟ್ಟ ಆರೋಪ ಹೊರಿಸಲಾಗಿದೆ. ಮತ್ತೊಂದೆಡೆ, ಈ ಪ್ರಕರಣದಲ್ಲಿ ಬ್ಲಾಕ್ ಪಂಚಾಯಿತಿ ರಾಜ್ ಅಧಿಕಾರಿ ಗಿರಿಜೇಶ್ ನಂದನ್, ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯಿಂದ ಸ್ಪಷ್ಟನೆ ಕೇಳಿದ್ದಾರೆ.
ಕಟ್ಟಡ ಕಾಮಗಾರಿಯಲ್ಲಿ ನಡೆದಿತ್ತು ಅಕ್ರಮ:ಔರೈ ಪಂಚಾಯಿತಿ ಭವನವನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿದೆಯಂತೆ. ಆದರೆ, ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದರಿಂದ ಇಲ್ಲಿನ ನೌಕರ ಜೈಲು ಸೇರಿದ್ದ. 15 ವರ್ಷಗಳ ಬಳಿಕ ಅದೇ ಕಟ್ಟಡವನ್ನು ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿ ಜೆಸಿಬಿಯಿಂದ ಕೆಡವಿ ಕಟ್ಟಡದ ಅವಶೇಷಗಳನ್ನು ಮಾರಾಟ ಮಾಡಿದ್ದಾರೆ. ಪಂಚಾಯತ್ ಭವನ ಕೆಡವಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿತ್ತು.