ಡೆಹ್ರಾಡೂನ್: ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ತಪ್ಪುದಾರಿಗೆಳೆಯುವ ಜಾಹೀರಾತು ಉಲ್ಲೇಖಿಸಿ ಪತಂಜಲಿಯ ಉತ್ಪನ್ನ ತಯಾರಕ ದಿವ್ಯ ಫಾರ್ಮಸಿಗೆ 5 ಔಷಧಗಳನ್ನು ಉತ್ಪಾದನೆ ನಿಲ್ಲಿಸುವಂತೆ ಸೂಚಿಸಿದೆ. ಈ ಹೆಸರಿನ BPgrit, Madhugrit, Thyrogrit, Lipidome ಮತ್ತು iGrit Gold ಔಷಧಗಳಿಗೆ ತಡೆಯೊಡ್ಡಿದ್ದು,ಇವುಗಳನ್ನು ರಕ್ತದೊತ್ತಡ, ಮಧುಮೇಹ, ಗಾಯಿಟರ್ (ಗೋಯಿಟರ್), ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ದೂರು ಏನು?:ಕೇರಳದ ವೈದ್ಯ ಕೆ.ವಿ.ಬಾಬು ಅವರು ಜುಲೈನಲ್ಲಿ ದೂರು ನೀಡಿದ್ದರು. ಪತಂಜಲಿಯ ದಿವ್ಯ ಫಾರ್ಮಸಿ ಪರವಾಗಿ ಡ್ರಗ್ಸ್ ಅಂಡ್ ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತು) ಕಾಯಿದೆ 1954, ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ 1940 ಮತ್ತು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ನಿಯಮಗಳು 1945 ರ ಅಡಿ ಕಾನೂನು ನಿಯಮ ಉಲ್ಲಂಘನೆ ಬಗ್ಗೆ ಆರೋಪಿಸಿದ್ದರು. ಅವರು ಮತ್ತೊಮ್ಮೆ ಅಕ್ಟೋಬರ್ 11 ರಂದು ಇಮೇಲ್ ಮೂಲಕ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ (ಎಸ್‌ಎಲ್‌ಎ) ದೂರು ಸಲ್ಲಿಸಿದ್ದರು.
ಪತಂಜಲಿ ಜಾಹೀರಾತು ಹಿಂಪಡೆಯಲು ಸೂಚನೆ: ಫಾರ್ಮುಲೇಶನ್ ಶೀಟ್ ಮತ್ತು ಲೇಬಲ್ ಅನ್ನು ಬದಲಾಯಿಸುವ ಜತೆಗೆ ಎಲ್ಲ 5 ಔಷಧಗಳಿಗೆ ಮರು ಅನುಮೋದನೆ ಪಡೆಯಲು ಪ್ರಾಧಿಕಾರವು ಪತಂಜಲಿಗೆ ತಿಳಿಸಿದೆ. ತಿದ್ದುಪಡಿಗೆ ಒಪ್ಪಿಗೆ ಪಡೆದ ಬಳಿಕವೇ ಕಂಪನಿಯು ಮತ್ತೆ ಉತ್ಪಾದನೆ ಆರಂಭಿಸಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಬಾಬಾ ರಾಮದೇವ ಪ್ರತಿಕ್ರಿಯೆ ಏನು: ಕಂಪನಿ ಎಲ್ಲ ಉತ್ಪನ್ನಗಳು ಮತ್ತು ಔಷಧಗಳನ್ನು ನಿಗದಿತ ಮಾನದಂಡಗಳ ಪ್ರಕಾರ ಉತ್ಸಾದಿಸುತ್ತಿದೆ. ಈ ಎಲ್ಲ ಶಾಸನಬದ್ಧ ಪ್ರಕ್ರಿಯೆಗಳನ್ನು ಪಾಲಿಸಿ ಪೂರೈಕೆ ಮಾಡಲಿದೆ ಎಂದು ದಿವ್ಯಾ ಫಾರ್ಮಸಿ ಪರ ಬಾಬಾ ರಾಮ್ ದೇವ್ ಅವರು ಪ್ರತಿಕ್ರಿಯಿಸಿದ್ದಾರೆ.
ದಿವ್ಯಾ ಫಾರ್ಮಸಿ ಹೇಳಿದ್ದಿಷ್ಟು:ಪತಂಜಲಿಯ ಔಷಧ ತಯಾರಿಕಾ ಘಟಕ ದಿವ್ಯ ಫಾರ್ಮಸಿಯು ಅತ್ಯುನ್ನತ ಸಂಶೋಧನೆ ಮತ್ತು ಗುಣಮಟ್ಟದೊಂದಿಗೆ ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಔಷಧಗಳನ್ನು ತಯಾರಿಸುವ ಸಂಸ್ಥೆ, 500 ಕ್ಕೂ ಹೆಚ್ಚು ವಿಜ್ಞಾನಿಗಳ ಸಹಾಯದಿಂದ, ಪೂರ್ವಭಾವಿ ಮತ್ತು ಕ್ಲಿನಿಕಲ್ ಪ್ರಯೋಗಗಳ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತದೆ.