ನವದೆಹಲಿ:ಸ್ವಾತಂತ್ರ್ಯದ ನಂತರ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳ ಜೊತೆಗೆ ಅನೇಕ ಮಹಾನ್ ನಾಯಕರ ಕೊಡುಗೆಗಳನ್ನು ಅಳಿಸಿ ಹಾಕಲು ಪ್ರಯತ್ನಿಸಲಾಗಿದೆ. ಆದ್ರೆ ಇದೀಗ ಆ ತಪ್ಪುಗಳನ್ನು ನಮ್ಮ ಸರ್ಕಾರದಿಂದ ಸರಿಪಡಿಸಲಾಗುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತ್ಯುತ್ಸವದ ಅಂಗವಾಗಿ, ಭಾನುವಾರ ಮೋದಿ ಇಂಡಿಯಾ ಗೇಟ್‌ನಲ್ಲಿ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ವಿಶ್ವದ ಯಾವುದೇ ಶಕ್ತಿ ನವಭಾರತ ನಿರ್ಮಾಣದ ಗುರಿ ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ. 2047 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತು ನೂರು ವರ್ಷವಾಗಲಿದೆ. ಅಷ್ಟರೊಳಗೆ ನವಭಾರತ ನಿರ್ಮಾಣವಾಗಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ "ಮಾಡಬಲ್ಲೆವು" ಮತ್ತು "ಮಾಡುವೆವು" ಎಂಬ ಧ್ಯೇಯವಾಕ್ಯದಿಂದ ಸ್ಫೂರ್ತಿ ಪಡೆಯುವಂತೆ ಜನತೆಗೆ ಮೋದಿ ಉತ್ತೇಜಿಸಿದರು.
ಸ್ವಾತಂತ್ರ್ಯದ ನಂತರ ರಾಷ್ಟ್ರದ ಸಂಸ್ಕೃತಿಯ ಹೊರತಾಗಿ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಅಳಿಸಲು ಪ್ರಯತ್ನಿಸಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟವು ಲಕ್ಷಾಂತರ ಜನರ ತ್ಯಾಗವನ್ನು ಒಳಗೊಂಡಿದೆ. ಆದರೆ ಅವರ ಇತಿಹಾಸವನ್ನು ಅಳಿಸಿ ಹಾಕಲು ಪ್ರಯತ್ನಿಸಲಾಗಿದೆ. ಇಂದು ಆ ತಪ್ಪುಗಳನ್ನು ಸರಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, 2019, 2020, 2021 ಮತ್ತು 2022 ರ 'ಸುಭಾಸ್ ಚಂದ್ರ ಬೋಸ್ ಆಪ್ದ ಪ್ರಬಂಧನ್ ಪುರಸ್ಕಾರ'ವನ್ನು ಸಹ ಪ್ರದಾನ ಮಾಡಿದರು. ಸಮಾರಂಭದಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.