ಲಂಡನ್ : ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ಕ್ರೂರ ದಾಳಿಗೆ ಒಳಗಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ದೇಶಕ್ಕೆ ಪರ್ಯಾಯ ವ್ಯವಸ್ಥೆ ಒದಗಿಸಲು ಪ್ರತಿಪಕ್ಷಗಳೊಳಗೆ ಮಾತುಕತೆಗಳು ನಡೆಯುತ್ತಿವೆ ಎಂದು ಶನಿವಾರ ಹೇಳಿದ್ದಾರೆ. ಬಿಬಿಸಿ ವಿರುದ್ಧ ಇತ್ತೀಚಿನ ತೆರಿಗೆ ಸಮೀಕ್ಷೆ ಕ್ರಮವು ದೇಶದಾದ್ಯಂತ ವಿರೋಧದ ಧ್ವನಿಯನ್ನು ನಿಗ್ರಹಿಸಲಾಗುತ್ತಿದೆ ಎಂಬುದರ ಉದಾಹರಣೆಯಾಗಿದೆ. ಅದಕ್ಕಾಗಿಯೇ ತಾವು ದೇಶದ ಧ್ವನಿಯನ್ನು ಉಡುಗಿಸುವ ಆಡಳಿತಾರೂಢ ಬಿಜೆಪಿಯ ಪ್ರಯತ್ನಗಳ ವಿರುದ್ಧದ ಧ್ವನಿಯ ಅಭಿವ್ಯಕ್ತಿಯಾಗಿ 'ಭಾರತ್ ಜೋಡೋ ಯಾತ್ರೆ' ಕೈಗೊಳ್ಳಬೇಕಾಯಿತು ಎಂದು ಹೇಳಿದರು.
ನಮ್ಮ ಪ್ರಜಾಪ್ರಭುತ್ವದ ರಚನೆಗಳು ಗಂಭೀರ ದಾಳಿಗೆ ಒಳಗಾಗಿರುವುದರಿಂದ ಯಾತ್ರೆ ನಡೆಸುವುದು ಅಗತ್ಯವಾಗಿತ್ತು ಎಂದು ರಾಹುಲ್ ಹೇಳಿದರು. ಭಾರತೀಯ ಪತ್ರಕರ್ತರ ಸಂಘ (IJA) ಆಯೋಜಿಸಿದ್ದ ಇಂಡಿಯಾ ಇನ್ಸೈಟ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಧ್ಯಮ, ಸಾಂಸ್ಥಿಕ ಚೌಕಟ್ಟುಗಳು, ನ್ಯಾಯಾಂಗ, ಸಂಸತ್ತು ಎಲ್ಲವೂ ದಾಳಿಗೆ ಒಳಗಾಗಿವೆ ಮತ್ತು ಸಾಮಾನ್ಯ ಮಾರ್ಗಗಳ ಮೂಲಕ ಜನರ ಧ್ವನಿಯನ್ನು ಎತ್ತಿ ತೋರಿಸಲು ನಮಗೆ ತುಂಬಾ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.
ಬಿಬಿಸಿ ಈಗ ಅದನ್ನು ಕಂಡುಹಿಡಿದಿದೆ, ಆದರೆ ಇದು ಭಾರತದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಪತ್ರಕರ್ತರನ್ನು ಬೆದರಿಸಲಾಗುತ್ತಿದೆ, ಅವರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಸರ್ಕಾರದ ಮಾತು ಕೇಳುವ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಲಾಗುತ್ತಿದೆ. ಇದು ಒಂದು ನಿರ್ದಿಷ್ಟ ಮಾದರಿಯ ಭಾಗವಾಗಿರುವುದರಿಂದ ನಾನು ಇವರಿಂದ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ಬಿಬಿಸಿ ಸರ್ಕಾರದ ವಿರುದ್ಧ ಬರೆಯುವುದನ್ನು ನಿಲ್ಲಿಸಿದರೆ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. ಎಲ್ಲಾ ಪ್ರಕರಣಗಳು ಕಣ್ಮರೆಯಾಗುತ್ತವೆ ಎಂದು ಅವರು ನುಡಿದರು.