ಶ್ರೀನಗರ(ಜಮ್ಮು-ಕಾಶ್ಮೀರ್):ಪುಲ್ವಾಮಾದ ಕಾಕಪೋರಾ ರೈಲ್ವೆ ನಿಲ್ದಾಣದಲ್ಲಿ ಉಗ್ರರು ಕರ್ತವ್ಯನಿರತ ಆರ್ಪಿಎಫ್ ಸಿಬ್ಭಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ.
ಕಾಕಪೋರಾ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ರೈಲ್ವೇ ಪೊಲೀಸ್ ಪಡೆ ಸಿಬ್ಬಂದಿ ನಿಲ್ದಾಣದ ಹೊರಗಡೆ ಇರುವ ಟೀ ಸ್ಟಾಲ್ನಲ್ಲಿ ಚಹಾ ಸೇವನೆ ಮಾಡ್ತಿದ್ದರು. ಈ ವೇಳೆ ಭಯೋತ್ಪಾದಕರಿಂದ ದಾಳಿ ನಡೆದಿದೆ. ಗಾಯಾಳುಗಳನ್ನು ಸುರಂದರ್ ಸಿಂಗ್ ಹಾಗು ದೇವ್ರಾಜ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಕಾಕಪೋರಾದಲ್ಲಿ ಉಗ್ರರು ದಾಳಿ ನಡೆಸಿದಾಗ ರೈಲ್ವೇ ರಕ್ಷಣಾ ಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಈ ವೇಳೆ ಓರ್ವ ನಿಧನರಾಗಿದ್ದು, ಮತ್ತೋರ್ವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು.
ಘಟನಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಉಗ್ರರ ಶೋಧಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ನಾಲ್ವರು ಎಲ್ಇಟಿ ಭಯೋತ್ಪಾದಕರ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈ ದುಷ್ಕೃತ್ಯ ನಡೆದಿದೆ.