ಹೈದರಾಬಾದ್:ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿನ ಕೆಲ ಘಟನೆಗಳು ಎರಡೂ ರಾಜ್ಯಗಳ ರಾಜಕೀಯಕ್ಕೆ ಬಳಕೆಯಾಗುತ್ತಿವೆ. ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಕೆಲ ದಿನಗಳ ಹಿಂದೆ ರವೀಶ್ ನರೇಶ್ ಎಂಬುವವರು ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ತೆಲಂಗಾಣದ ಸಚಿವ ಕೆ.ಟಿ.ರಾಮರಾವ್ ( ಕೆ.ಟಿ.ಆರ್) ಬೆಂಗಳೂರು ಬಿಟ್ಟು ಹೈದರಾಬಾದ್ಗೆ ಬನ್ನಿ ಎಂದು ಕರೆ ನೀಡಿದ್ದರು. ಇದಕ್ಕೆ ಅವತ್ತೇ ಕರ್ನಾಟಕದ ಸಚಿವ ಸಿ.ಎನ್. ಅಶ್ವಥ್ ನಾರಾಯಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿರುಗೇಟು ನೀಡಿದ್ದರು.
ಇದೀಗ ಹೈದರಾಬಾದ್ನಲ್ಲಿ ನಡೆದ ಘಟನೆಯೊಂದರ ಸಂಬಂಧ ಕರ್ನಾಟಕ ರಾಜ್ಯ ಬಿಜೆಪಿ ಘಟಕವು ತೆಲಂಗಾಣದ ಸಚಿವ ಕೆ.ಟಿ.ಆರ್. ಅವರ ಕಾಲೆಳೆದು ಮತ್ತೊಮ್ಮೆ ತಿರುಗೇಟು ಕೊಟ್ಟಿದೆ. 'ಕೆ.ಟಿ.ಆರ್. ಗಾರು ನಮ್ಮ ಬೆಂಗಳೂರಿನೊಂದಿಗೆ ಸ್ಪರ್ಧೆ ಮಾಡುವುದನ್ನು ಬಿಟ್ಟು ಬಿಡಿ, ಕರಾಚಿ ಅಥವಾ ಲಾಹೋರದೊಂದಿಗೆ ನೀವು ಸ್ಪರ್ಧಿಸಬಹುದು' ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದೆ.
ಅಲ್ಲದೇ, 'ನಿಮ್ಮ ತುಷ್ಟೀಕರಣ ನೀತಿ ನಿಲ್ಲಿಸಿ ಮತ್ತು ಈ ಜಿಹಾದಿಗಳಿಗೆ ಕಾನೂನಿನ ನಿಜವಾದ ಶಕ್ತಿಯನ್ನು ತೋರಿಸಿ... ನೀವು ನಮ್ಮ ಸವಾಲನ್ನು ಸ್ವೀಕರಿಸುತ್ತೀರಾ ಎಂದು ಟ್ವೀಟ್ ಮೂಲಕ ತೆಲಂಗಾಣದ ಸಚಿವ ಕೆ.ಟಿ.ಆರ್. ಅವರಿಗೆ ಮರು ಸವಾಲು ಹಾಕಿದೆ.