ಕೋಲ್ಕತಾ:ಟಿಎಂಸಿ ನಾಯಕರೊಬ್ಬರ ಬೆಂಬಲಿಗರು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ನಡೆಸಿದ ದಾಳಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಡಾ. ಸಿ.ವಿ.ಆನಂದ ಬೋಸ್ ಶುಕ್ರವಾರ ತೀವ್ರವಾಗಿ ಖಂಡಿಸಿದ್ದಾರೆ. ಟಿಎಂಸಿ ನಾಯಕನ ಸಂದೇಶಖಾಲಿ ನಿವಾಸದಲ್ಲಿ ಪರಿಶೀಲನೆಗೆ ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದರ ಸಂಕೇತವಾಗಿದೆ ಎಂದು ರಾಜ್ಯಪಾಲರು ಕಿಡಿ ಕಾರಿದ್ದಾರೆ.
ರಾಜ್ಯದ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಿರುವ ಬೋಸ್, ತಮ್ಮ ಸಾಂವಿಧಾನಿಕ ಅಧಿಕಾರಗಳನ್ನು ಅನ್ವೇಷಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
"ಸಂದೇಶಖಾಲಿಯಲ್ಲಿ ನಡೆದ ಘಟನೆ ಆತಂಕಕಾರಿ ಮತ್ತು ಶೋಚನೀಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಅನಾಗರಿಕತೆ ಮತ್ತು ವಿಧ್ವಂಸಕತೆಯನ್ನು ನಿಲ್ಲಿಸುವುದು ನಾಗರಿಕ ಸರ್ಕಾರದ ಕರ್ತವ್ಯವಾಗಿದೆ. ರಾಜ್ಯಪಾಲರಾಗಿ ಸೂಕ್ತ ರೀತಿಯಲ್ಲಿ ಸೂಕ್ತ ಕ್ರಮಕ್ಕಾಗಿ ನನ್ನ ಎಲ್ಲಾ ಸಾಂವಿಧಾನಿಕ ಆಯ್ಕೆಗಳನ್ನು ನಾನು ಪರಿಶೀಲನೆ ಮಾಡಲಿದ್ದೇನೆ" ಎಂದು ಬೋಸ್ ರಾಜಭವನದಿಂದ ಬಿಡುಗಡೆ ಮಾಡಿದ ಧ್ವನಿ ಸಂದೇಶದಲ್ಲಿ ತಿಳಿಸಿದ್ದಾರೆ. ಬಂಗಾಳವು ಬನಾನಾ ರಿಪಬ್ಲಿಕ್ ಅಲ್ಲ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಾಗರಿಕತೆ ಮತ್ತು ವಿಧ್ವಂಸಕತೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.