ರಾಜ್ಕೋಟ್ (ಗುಜರಾತ್):ಗುಜರಾತ್ನಲ್ಲಿ ಭಾರಿ ದುರಂತವೊಂದು ತಪ್ಪಿದೆ. ನಗರದಲ್ಲಿ ದೊಡ್ಡ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅಲ್-ಖೈದಾ ಭಯೋತ್ಪಾದನ ಸಂಘಟನೆಗೆ ಸೇರಿದ್ದ ಮೂವರು ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ವಿಚಾರಣೆ ವೇಳೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದ್ದು, ಬಂಧಿತ ಮೂವರು ಉಗ್ರರು ಸೌರಾಷ್ಟ್ರದ ಜನ್ಮಾಷ್ಟಮಿಯಂದು ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಗುಜರಾತ್ನ ರಾಜ್ಕೋಟ್ನಲ್ಲಿ ಎರಡು ದಿನಗಳ ಹಿಂದೆ ಭಯೋತ್ಪಾದಕ ಸಂಘಟನೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿ, ಎಟಿಎಸ್ ತೀವ್ರ ವಿಚಾರಣೆ ನಡೆಸಿದೆ. ಈ ವೇಳೆ ಸೌರಾಷ್ಟ್ರದ ಜನ್ಮಾಷ್ಟಮಿಯಂದು ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಗುಜರಾತ್ನಲ್ಲಿ ಸೌರಾಷ್ಟ್ರದ ಜನ್ಮಾಷ್ಟಮಿಯನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಡೀ ರಾಜ್ಯವೇ ಈ ಹಬ್ಬವನ್ನು ಸಂಭ್ರಮಿಸುತ್ತದೆ. ಇಂತಹ ವಿಶೇಷ ದಿನದಂದು ಭಯೋತ್ಪಾದಕರು ದಾಳಿ ನಡೆಸಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ.
AK-47 ಆಪರೇಟ್ ಮಾಡಲು ತರಬೇತಿ:ವಿಚಾರಣೆ ವೇಳೆ ಮತ್ತೊಂದು ಗಂಭೀರ ವಿಚಾರ ಗೊತ್ತಾಗಿದೆ. ಈ ಮೂವರು ಉಗ್ರರು ಸಾಮಾಜಿಕ ಜಾಲತಾಣಗಳ ಮೂಲಕ ಎಕೆ-47 ಆಪರೇಟ್ ಮಾಡಲು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಜೊತೆಗೆ ಪಿಸ್ತೂಲ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವ ಶಂಕೆ ಇದೆ. ಜನ್ಮಾಷ್ಟಮಿಯಂದು ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು. ಆದರೆ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಈ ಪಿತೂರಿಯನ್ನು ವಿಫಲಗೊಳಿಸಿದೆ.