ದರ್ಭಂಗಾ(ಬಿಹಾರ): ದೇಶಾದ್ಯಂತ ಸುದ್ದಿಯಾಗಿರುವ ಸಂಸತ್ ಭದ್ರತಾ ಲೋಪ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ಸಂಬಂಧ ಎಟಿಎಸ್ ತಂಡ ಹಾಗೂ ದೆಹಲಿ ಪೊಲೀಸರು ಭದ್ರತಾ ಲೋಪ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಕರೆಯಲಾದ ಲಲಿತ್ ಝಾ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ದರ್ಭಂಗಾದ ಬಹೇರಾ ಜಿಲ್ಲೆಯ ರಾಂಪುರ ಉದಯ ಗ್ರಾಮಕ್ಕೆ ಸೋಮವಾರ ಸಂಜೆ ಎಟಿಎಸ್ ತಂಡ ಭೇಟಿ ಆಗಮಿಸಿ ಪರಿಶೀಲನೆ ನಡೆಸಿದೆ. ಜೊತೆಗೆ ಮಂಗಳವಾರ ದೆಹಲಿ ಪೊಲೀಸರು ಕೂಡ ಲಲಿತ್ ಝಾ ಮನೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.
ಎಟಿಎಸ್ ಮತ್ತು ದೆಹಲಿ ಪೊಲೀಸರಿಂದ ತನಿಖೆ: ಪ್ರಕರಣ ಪ್ರಮುಖ ಆರೋಪಿ ಲಲಿತ್ ಝಾ ಅವರ ತಂದೆ ತಾಯಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಲಲಿತ್ ಝಾ ತಂದೆ ದೇವಾನಂದ್ ಝಾ, ತಾಯಿ ಮಂಜುಳಾ ಝಾ, ಸಹೋದರರಾದ ಹರಿದರ್ಶನ್ ಝಾ ಮತ್ತು ಶಂಭು ಝಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸೋಮವಾರ ಇಬ್ಬರು ಎಟಿಎಸ್ ಅಧಿಕಾರಿಗಳು ಲಲಿತ್ ಝಾ ಮನೆಗೆ ಭೇಟಿ ನೀಡಿದ್ದರು ಎಂದು ಬಹೇರಾ ಪೊಲೀಸ್ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ: ಇಬ್ಬರು ಎಟಿಎಸ್ ಅಧಿಕಾರಿಗಳು ಝಾ ಕುಟುಂಬ ಸದಸ್ಯರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಲಿತ್ ಝಾ ಕುರಿತ ಹಲವು ಮಾಹಿತಿಗಳನ್ನು ಕುಟುಂಬ ಸದಸ್ಯರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲಲಿತ್ ಯಾವಾಗ ಊರಿಗೆ ಬಂದು ಹೋಗುತ್ತಿದ್ದರು , ಏನೆಲ್ಲ ಕೆಲಸ ಮಾಡುತ್ತಿದ್ದರು ಎಂದೆಲ್ಲ ಮಾಹಿತಿ ಕಲೆ ಹಾಕಿದ್ದಾರೆ.