ಹೈದರಾಬಾದ್: ಇಲ್ಲಿನ ಜುಬಿಲಿಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಮಹಿಳೆಯೊಬ್ಬರು ತನ್ನ ಗಂಡ ಮತ್ತು ಕುಟುಂಬಸ್ಥರ ವಿರುದ್ಧ ಮಾನಸಿಕ, ದೈಹಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಹೇಳಿಕೆಯ ಪ್ರಕಾರ, ಸಂತ್ರಸ್ತೆ ರಹಮತ್ನಗರದಲ್ಲಿ ನೆಲೆಸಿದ್ದು, 2016ರಲ್ಲಿ ಯುವಕನೊಬ್ಬನನ್ನು ಪ್ರೀತಿಸಿ ವರಿಸಿದ್ದಾರೆ. ಆರಂಭದಲ್ಲಿ ಸುಖವಾಗಿದ್ದ ದಾಂಪತ್ಯ ದಿನಕಳೆದಂತೆ ಚಿಕ್ಕಪುಟ್ಟ ವಿಷಯಕ್ಕೂ ಜಗಳಗಳು ಶುರುವಾಗಿ ಬದುಕು ಅಸಹನೀಯಗೊಳಿಸಿವೆ. ಗರ್ಭವತಿಯಾದ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿದರು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2020ರಲ್ಲಿ ಗಂಡನ ಸಹೋದರ, ಸಹೋದರಿ ಹಾಗು ಬಾವ ಸೇರಿ ಜಾತಿ ಹೆಸರಿನಲ್ಲಿ ನಿಂದಿಸುತ್ತಿದ್ದರು. ಇದ್ರ ಜೊತೆಗೆ, ಪದೇ ಪದೇ ಪೆಟ್ರೋಲ್ ಸುರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕ್ತಿದ್ದರು ಎಂದು ತಿಳಿಸಿದ್ದಾರೆ. ಪತಿಗೆ 1.50 ಲಕ್ಷ ಹಣ ಕೊಟ್ರೂ ಸಹ ಕಿರುಕುಳ ನಿಲ್ಲಲಿಲ್ಲ. ಬಲವಂತವಾಗಿ ಅರೆಬೆತ್ತಲೆಯಲ್ಲಿ ಕುಳಿತು, ಮೂತ್ರ ಕುಡಿಯುವಂತೆ ಒತ್ತಾಯಿಸಿದ್ರು ಎಂದು ಮಹಿಳೆ ದೌರ್ಜನ್ಯವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.
ಜೂಬ್ಲಿಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.