ಪ್ರಯಾಗ್‌ರಾಜ್ (ಉತ್ತರಪ್ರದೇಶ):ಗ್ಯಾಂಗ್‌ಸ್ಟರ್, ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಮತ್ತು ಅವರ ಸಹೋದರನ ಕೊಲೆ ಉತ್ತರಪ್ರದೇಶದಲ್ಲಿ ಸಂಚಲನ ಉಂಟು ಮಾಡಿದೆ. ಮಾಧ್ಯಮಗಳ ಕ್ಯಾಮರಾ ಎದುರೇ ಇಬ್ಬರ ಹತ್ಯೆಯಾಗಿದೆ. ವೈದ್ಯಕೀಯ ತಪಾಸಣೆಗಾಗಿ ಇಬ್ಬರನ್ನೂ ಆಸ್ಪತ್ರೆಗೆ ಕರೆತರುವಾಗಿನ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹತ್ಯೆ ಘಟನೆಯ ಇಂಚಿಂಚು ಮಾಹಿತಿ ವಿಡಿಯೋದಲ್ಲಿ ಕಾಣಬಹುದು.
ಅತೀಕ್ ಮತ್ತು ಅಶ್ರಫ್ರಿಗೆ ಕೈಕೋಳ ಹಾಕಿ ಪೊಲೀಸ್ ಜೀಪಿನಲ್ಲಿ ಕರೆತರಲಾಯಿತು. ಅತೀಕ್ ವಾಹನದಿಂದ ಇಳಿಯುವಾಗಲೇ ಯಾರ ಕಡೆಯೋ ನೋಡಿ ತಲೆ ಆಡಿಸುತ್ತಾರೆ. ಬಳಿಕ ಇಬ್ಬರನ್ನೂ ಪೊಲೀಸರು ಸುತ್ತುವರಿದು ಕರೆತರುತ್ತಾರೆ. ಬಳಿಕ ಮಾಧ್ಯಮಗಳು ಮಗನ ಸಾವಿನ ಬಳಿಕ ಅಂತ್ಯಕ್ರಿಯೆಗೆ ಯಾಕೆ ಹೋಗಲಿಲ್ಲ ಎಂದು ಅವರ ಬಳಿ ಪ್ರಶ್ನೆ ಮಾಡುತ್ತಾರೆ. ಈ ವೇಳೆ ಅತೀಕ್ ಪ್ರತಿಕ್ರಿಯಿಸಿ, ಕರೆದುಕೊಂಡು ಹೋಗಲಿಲ್ಲ, ಹಾಗಾಗಿ ಹೋಗಲಿಲ್ಲ ಎನ್ನುತ್ತಾರೆ.
ಅತೀಕ್ ಹಿಂದಿಯಲ್ಲಿ "ನಹೀ ಲೇ ಗಯೇ ತೋ ನಹಿ ಗಯೇ" ಎಂದು ಹೇಳಿ ಮುಗಿಸುತ್ತಿದ್ದಂತೆ, ಪತ್ರಕರ್ತನ ವೇಷದಲ್ಲಿದ್ದ ಆರೋಪಿ ಪಿಸ್ತೂಲಿನಿಂದ ಅತೀಕ್ ತಲೆಗೆ ಗುಂಡು ಹಾರಿಸುತ್ತಾನೆ. ಇದಾದ ಬಳಿಕ ಮೂವರು ಆರೋಪಿಗಳು ಏಕಕಾಲಕ್ಕೆ ಇಬ್ಬರ ಮೇಲೂ ಗುಂಡಿನ ಸುರಿಮಳೆ ಗೈದಿದ್ದಾರೆ. ಗುಂಡಿನ ಮೊರೆತ ಕೇಳಿದ ತಕ್ಷಣ ಅಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಇದು ರಾಷ್ಟ್ರೀಯ ಮಾಧ್ಯಮವೊಂದರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುಂಡೇಟಿನಿಂದ ನೆಲಕ್ಕುರುಳಿ ಬಿದ್ದಿದ್ದ ಅತೀಕ್ ಮತ್ತು ಅಶ್ರಫ್ನ ಮೇಲೆ 10 ಬಾರಿ ಗುಂಡು ಹಾರಿಸಲಾಗಿದೆ. ಬಳಿಕ ಪೊಲೀಸರು ಓಡಿಬಂದು ಶೂಟರ್ಗಳನ್ನು ಹಿಡಿದಿದ್ದಾರೆ. ಆರೋಪಿಗಳು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು. ಮೂವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಪತ್ರಕರ್ತರೊಬ್ಬರು ಓಡಿಹೋಗುವಾಗ ಕೆಳಗೆ ಬಿದ್ದಿದ್ದರಿಂದ ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಬುಲೆಟ್ ತಾಕಿದೆ ಎಂದು ಪ್ರಯಾಗರಾಜ್ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ತಿಳಿಸಿದ್ದಾರೆ.