ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಗ್ಯಾಂಗ್ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಅಹ್ಮದ್ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಶನಿವಾರ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಅತೀಕ್ ಪುತ್ರ ಅಸದ್ ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆಯಾದ ಎರಡೇ ದಿನದಲ್ಲಿ ತಂದೆ ಮತ್ತು ಚಿಕ್ಕಪ್ಪನ ಕೊಲೆಯಾಗಿದೆ.
ಇದನ್ನೂ ಓದಿ:101 ಕೇಸ್ ಎದುರಿಸುತ್ತಿರುವ ಮಾಫಿಯಾ ಡಾನ್ ಅತೀಕ್ ಅಹ್ಮದ್: ಕಿಡ್ನಾಪ್ ಕೇಸ್ನಲ್ಲಿ ಜೀವಾವಧಿ ಶಿಕ್ಷೆ
2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣ ಮತ್ತು ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ವಕೀಲ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅತೀಕ್ ಆರೋಪಿಯಾಗಿದ್ದರು. ಇದೇ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲೂ ಅತೀಕ್ನ ಪುತ್ರ ಅಸದ್ ಮತ್ತ ಶೂಟರ್ ಗುಲಾಮ್ ಭಾಗಿಯಾಗಿದ್ದರು. ಆದರೆ, ಏಪ್ರಿಲ್ 13ರಂದು ಅತೀಕ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸ್ ವಾಹನ ಮೇಲೆ ದಾಳಿಗೆ ಹೊಂಚು ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ನಡೆದ ಎನ್ಕೌಂಟರ್ನಲ್ಲಿ ಅಸದ್ ಮತ್ತು ಗುಲಾಮ್ ಹತರಾಗಿದ್ದರು.
ಇಂದು ಅತೀಕ್ ಮತ್ತು ಅಶ್ರಫ್ ಇಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ಪೊಲೀಸರು ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ಮಾಡಲಾಗಿದೆ. ಇದಕ್ಕೂ ಮುನ್ನ ಆತನ ಮಗ ಅಸದ್ ಅಂತ್ಯಕ್ರಿಯೆಗೆ ಕುರಿತ ಕೇಳಿದ ಪ್ರಶ್ನೆಗೆ ಅತೀಕ್, ನಮ್ಮನ್ನು ಕರೆದುಕೊಂಡು ಹೋಗಲಿಲ್ಲ, ಆದ್ದರಿಂದ ನಾವು ಹೋಗಲಿಲ್ಲ ಎಂದು ಹೇಳಿದರು. ಇದೇ ಅತೀಕ್ನಿಂದ ಬಂದ ಕೊನೆಯ ಮಾತು...
ವಿಪರ್ಯಾಸವೆಂದರೆ ಅತೀಕ್‌ಗೆ ಅವರ ಪುತ್ರ ಅಸದ್‌ನ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಅಸದ್ನನ್ನು ಶನಿವಾರ ಮಧ್ಯಾಹ್ನ ಕಸರಿ ಮಸಾರಿಯಲ್ಲಿ ಸಮಾಧಿ ಮಾಡಲಾಯಿತು. ಭಾರಿ ಪೊಲೀಸ್ ಭದ್ರತೆಯ ನಡುವೆ ಕೆಲವು ದೂರದ ಸಂಬಂಧಿಕರು ಮತ್ತು ಸ್ಥಳೀಯರ ಸಮ್ಮುಖದಲ್ಲಿ ಧಪನ್ ಮಾಡಲಾಯಿತು. ಒಂದು ಗಂಟೆಗಳ ಕಾಲ ಅಂತ್ಯಕ್ರಿಯೆ ಕಾರ್ಯ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅತೀಕ್ ಶುಕ್ರವಾರವಷ್ಟೇ ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಿದ್ದರು. ಅಂಬೇಡ್ಕರ್ ಜಯಂತಿ ನಿಮಿತ್ತ ಕೋರ್ಟ್ ಶುಕ್ರವಾರ ರಜೆ ಇದ್ದ ಕಾರಣ ರಿಮಾಂಡ್ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಲಾಗಿತ್ತು ಎಂದು ಅತೀಕ್ ಪರ ವಕೀಲ ಮನೀಶ್ ಖನ್ನಾ ಹೇಳಿದ್ದರು.