ನವದೆಹಲಿ : ವಾಣಿಜ್ಯ ಅಡುಗೆ ಅನಿಲ (ಎಲ್‌ಪಿಜಿ) ದರ 19 ಕೆಜಿ ಸಿಲಿಂಡರ್‌ಗೆ 209 ರೂ. ಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಸದ್ಯ ಗೃಹಬಳಕೆಯ ಎಲ್‌ಪಿಜಿಯ ಬೆಲೆ ಪ್ರತಿ 14.2 ಕೆಜಿ ಸಿಲಿಂಡರ್‌ಗೆ ರೂ. 903 ರಷ್ಟಿದೆ.
ಇದೇ ವೇಳೆ ವಿಮಾನಯಾನ ಇಂಧನದ ಬೆಲೆಯನ್ನು ಹೆಚ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ದೇಶದಲ್ಲಿ ದಸರಾ, ದೀಪಾವಳಿ ಸೇರಿದಂತೆ ಹಬ್ಬದ ಸೀಸನ್ ಆರಂಭವಾಗಲಿದೆ. ಈ ಹಿನ್ನೆಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆಗಾಗಿ ವಿಮಾನಗಳನ್ನು ಬಳಸುತ್ತಾರೆ. ಹೀಗಿರುವಾಗ, ಹಬ್ಬದ ಸೀಸನ್ ಆರಂಭವಾಗುವ ಮುನ್ನವೇ ಪ್ರಯಾಣಿಕರಿಗೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಬಿಗ್ ಶಾಕ್ ನೀಡಿದ್ದು, ಇಂದು ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯನ್ನು ಶೇಕಡಾ 5 ರಷ್ಟು ಹೆಚ್ಚಿಸಿವೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ನೀಡಿದ ಮಾಹಿತಿ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ATF) ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಲೀಟರ್‌ಗೆ 5,779.84 ರೂ. ಅಥವಾ ಶೇಕಡಾ 5.1 ರಷ್ಟು ಹೆಚ್ಚಿಸಲಾಗಿದೆ. ಸದ್ಯಕ್ಕೆ ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಕಿಲೋ ಲೀಟರ್‌ಗೆ 1,18,199.17 ರೂ.ಗೆ ತಲುಪಿದ್ದು, ಇಂದಿನಿಂದಲೇ ಹೊಸ ಬೆಲೆ ಜಾರಿಗೆ ಬಂದಿದೆ.
ಮೆಟ್ರೋ ನಗರಗಳಲ್ಲಿ ಎಟಿಎಫ್ ಬೆಲೆ ಇಂತಿದೆ:
- ದೆಹಲಿ - ಪ್ರತಿ ಕಿಲೋ ಲೀಟರ್‌ಗೆ 1,18,199.17 ರೂಪಾಯಿ
- ಕೋಲ್ಕತ್ತಾ- ಪ್ರತಿ ಕಿಲೋ ಲೀಟರ್‌ಗೆ 1,26,697.08 ರೂಪಾಯಿ
- ಮುಂಬೈ- ಪ್ರತಿ ಕಿಲೋ ಲೀಟರ್‌ಗೆ 1,10,592.31 ರೂಪಾಯಿ
- ಚೆನ್ನೈ- ಪ್ರತಿ ಕಿಲೋ ಲೀಟರ್‌ಗೆ 1,22,423.92 ರೂಪಾಯಿ