ಬಾಲಸೋರ್ (ಒಡಿಶಾ): ತನ್ನ ಪತಿ ಮೃತಪಟ್ಟ 52 ವರ್ಷಗಳ ನಂತರ ಮಹಿಳೆಯೊಬ್ಬರು ಪಿಂಚಣಿ ಹಣವನ್ನು ಪಡೆದಿದ್ದಾರೆ. ಇದಕ್ಕೆ ಸ್ವತಃ ಹೈಕೋರ್ಟ್ ವಿಷಾದ ವ್ಯಕ್ತಪಡಿಸಿದೆ.
ಹೌದು, ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಒಎಸ್ಆರ್ಟಿಸಿ) ಕೆಲಸ ಮಾಡುತ್ತಿದ್ದ ಬಾಲಸೋರ್ ಜಿಲ್ಲೆಯ ಆರಾದ್ ಬಜಾರ್‌ನ ಭೀಮಸೇನ್ ಮೊಹಾಂತಿ ಎಂಬುವವರು ಮೃತಪಟ್ಟಿದ್ದರು. ಆಗ ಭೀಮಸೇನ್ ಅವರ ಪತ್ನಿ ಲಲಿತಾ ಮೊಹಂತಿ ಅವರಿಗೆ 37 ವರ್ಷವಾಗಿತ್ತು. ಈಗ ಆಕೆಗೆ 89 ವರ್ಷವಾಗಿದ್ದು, ಸುದೀರ್ಘ ಕಾನೂನು ಹೋರಾಟದ ನಂತರ ಲಲಿತಾರಿಗೆ ಕೊನೆಗೂ ನ್ಯಾಯ ಸಿಕ್ಕಿದೆ.
ಕೋರ್ಟ್ ಆದೇಶ ಜಾರಿಗೆ 9 ವರ್ಷ ಬೇಕಾಯಿತು!: ಪತಿ ಭೀಮಸೇನ್ ಮೊಹಾಂತಿ ನಿಧನದ ನಂತರ ಲಲಿತಾ ಅವರಿಗೆ ಒಎಸ್ಆರ್ಟಿಸಿಯಿಂದ ಯಾವುದೇ ಪಿಂಚಣಿ ಸಿಕ್ಕಿರಲಿಲ್ಲ. ಆದ್ದರಿಂದ ತನ್ನ ಜೀವನದುದ್ದಕ್ಕೂ ಅದಕ್ಕಾಗಿ ಹೋರಾಡಿದರು. ಬಹಳಷ್ಟು ಸಂಕಟಗಳ ನಡುವೆ ತನ್ನ ಕುಟುಂಬವನ್ನೂ ನಡೆಸುತ್ತಿದ್ದರು. ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಾಲಯವು ಪಿಂಚಣಿಗೆ ಆದೇಶ ನೀಡಿತ್ತು. ಆದರೆ, ಹಿಂದಿನ ಆದೇಶವನ್ನು ಜಾರಿಗೆ ತರಲು ಒಂಬತ್ತು ವರ್ಷಗಳು ಬೇಕಾಯಿತು.