ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಧಾರ್ಮಿಕ ಉತ್ಸವದಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ಪಾನಿಹಟಿ ದಂಡ ಮಹೋತ್ಸವದಲ್ಲಿ ಭಾನುವಾರ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತೆಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅಲ್ಲದೇ, ಇನ್ನೂ ಕನಿಷ್ಠ 15 ಜನರು ಅಸ್ವಸ್ಥರಾಗಿದ್ದಾರೆ.
ಉತ್ತರ24 ಪರಗಣ ಜಿಲ್ಲೆಯ ಪಾನಿಹಟಿಯಲ್ಲಿ ಈ ಮಹೋತ್ಸವಕ್ಕೆ 506 ವರ್ಷಗಳಷ್ಟು ಇತಿಹಾಸ ಇದೆ. ಇದು ಪಾನಿಹಟಿ ದಂಡಾ ಉತ್ಸವ ಎಂದೇ ಖ್ಯಾತಿಯಾಗಿದ್ದು, ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಉತ್ಸವ ಸ್ಥಗಿತವಾಗಿತ್ತು. ಇದೀಗ ಕೊರೊನಾ ಸೋಂಕು ಕಡಿಮೆಯಾದ ಕಾರಣ ಮಹೋತ್ಸವ ಪುನಾರಂಭವಾಗಿದೆ.
ಇಂದು ಬೆಳಗ್ಗೆ ಇಸ್ಕಾನ್ ದೇವಸ್ಥಾನದಲ್ಲಿ ದಂಡ ಮಹೋತ್ಸವ ನಡೆಯುತ್ತಿದ್ದು, ದೂರದ ಊರುಗಳಿಂದ ಬಂದಿರುವ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಈ ವೇಳೆ ಹೆಚ್ಚಿನ ಜನಸಂದಣಿಯಾಗಿದ್ದು, ಉಷ್ಣಾಂಶ ಮತ್ತು ತೇವಾಂಶ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.
ಪರಿಣಾಮ ವೃದ್ಧ ದಂಪತಿ ಸುಭಾಷ್ ಪಾಲ್ ಮತ್ತು ಶುಕ್ಲಾ ಪಾಲ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಈಗಾಗಲೇ ದೌಡಾಯಿಸಿದ್ದು, ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ:ಪಬ್ಜಿ ಗೇಮ್ ಸೋತಿದ್ದಕ್ಕೆ ಸ್ನೇಹಿತರಿಂದ ಗೇಲಿ: ನೇಣಿಗೆ ಶರಣಾದ ಕಾಂಗ್ರೆಸ್ ಮುಖಂಡನ ಮಗ!