ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಿರುವ ಈ ವೇಳೆಯಲ್ಲಿ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಸಾಂಕ್ರಾಮಿಕ ಆರಂಭದಿಂದ ಈವರೆಗೆ ಭಾರತದಲ್ಲಿ ಕೊರೊನಾ ವೈರಸ್ಗೆ ಬಲಿಯಾದವರ ಸಂಖ್ಯೆ 32 ಲಕ್ಷ ಎಂದು ಅಧ್ಯಯನವೊಂದು ಅಂದಾಜಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ನಿನ್ನೆಯವರೆಗೆ 4,83,178 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಆದರೆ 'ಸೈನ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಭಾರತ ಸರ್ಕಾರ ಅಧಿಕೃತವಾಗಿ ನೀಡಿದ ಸಾವಿನ ಸಂಖ್ಯೆಗಿಂತ ಆರು ಪಟ್ಟು ಹೆಚ್ಚು, ಅಂದರೆ ಸುಮಾರು 3.2 ಮಿಲಿಯನ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಡಾ. ಪ್ರಭಾತ್ ಝಾ ನೇತೃತ್ವದಲ್ಲಿ ಭಾರತ, ಕೆನಡಾ ಮತ್ತು ಅಮೆರಿಕದ ಸಂಶೋಧಕರು 1,40,000 ಜನರ ರಾಷ್ಟ್ರೀಯ ಪ್ರತಿನಿಧಿ ದೂರವಾಣಿ ಸಮೀಕ್ಷೆಯ ಡೇಟಾವನ್ನು, 2,00,000 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳ ವರದಿ ಹಾಗೂ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ ದಾಖಲಾದ ಸಾವುಗಳ ವರದಿ ಬಳಸಿ ಈ ಅಧ್ಯಯನ ನಡೆಸಿದ್ದಾರೆ.