ನವದೆಹಲಿ:ದೆಹಲಿ - ಎನ್‌ಸಿಆರ್‌ನಲ್ಲಿ ಅತ್ಯಂತ ಚಳಿ ದಾಖಲಾಗಿದೆ. ಇಂದು ದಾಖಲಾದ ಚಳಿ ಈ ಋತುವಿನಲ್ಲಿಯೇ ಅತ್ಯಂತ ಕಡಿಮೆ ಚಳಿಯ ದಿನವಾಗಿದೆ. ರಾಜಧಾನಿಯಲ್ಲಿ ತಾಪಮಾನವು 2.2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಈ ಹಿಂದೆ 2021ರಲ್ಲಿ ತಾಪಮಾನದಲ್ಲಿ ಭಾರಿ ಕುಸಿತ ದಾಖಲಾಗಿತ್ತು. ಆ ಸಮಯದಲ್ಲಿ ಕನಿಷ್ಠ ತಾಪಮಾನ 1.1 ಡಿಗ್ರಿ ದಾಖಲಾಗಿತ್ತು. ಅದಕ್ಕೂ ಮೊದಲು 2020 ರಲ್ಲಿ ಸಫ್ದರ್‌ಗಂಜ್‌ನಲ್ಲಿ 2.4 ಡಿಗ್ರಿಗಳಷ್ಟು ಕಡಿಮೆ ತಾಪಮಾನ ದಾಖಲಾಗಿತ್ತು. ಈಗ ಈ ಸೀಸನ್ನಲ್ಲಿ ಅತ್ಯಂತ ಕಡಿಮೆ ಚಳಿ ದಾಖಲಾಗಿದ್ದು, ಜನರು ಮೈಕೊರೆಯುವ ಚಳಿಗೆ ಬೆಚ್ಚಿ ಬಿದ್ದಿದ್ದಾರೆ.
ತಾಪಮಾನವು 3 ಡಿಗ್ರಿಗಿಂತ ಕಡಿಮೆ: ಹವಾಮಾನ ಇಲಾಖೆಯ ಪ್ರಕಾರ ಲೋಧಿ ರಸ್ತೆಯಲ್ಲಿ ಕನಿಷ್ಠ ತಾಪಮಾನ 2.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸಫ್ದರ್‌ಜಂಗ್‌ನಲ್ಲಿ ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪ್ರಸ್ತುತ ದೆಹಲಿ-ಎನ್‌ಸಿಆರ್‌ನಲ್ಲಿ ಶೀತ ದಿನದ ಪರಿಸ್ಥಿತಿಗಳಿವೆ. ಚಳಿಯ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಈ ವಾರ ಪೂರ್ತಿ ಚಳಿಗೆ ಜನರ ನಡುಕ:ಈ ವಾರಾಂತ್ಯದಲ್ಲಿ ಚಳಿಯಿಂದ ಜನರಿಗೆ ಮುಕ್ತಿ ಸಿಗುವುದಿಲ್ಲ. ಈ ಚಳಿಗಾಲದ ಸೀಜನ್ನಲ್ಲಿ ಮತ್ತಷ್ಟು ಹೆಚ್ಚಾಗಿ ಚಳಿ ದಾಖಲಾಗುವ ಸಾಧ್ಯತೆಯಿದೆ. ಜನವರಿ 6 ಮತ್ತು 7 ರಂದು ಹೆಚ್ಚು ಚಳಿ ದಾಖಲಾಗಲಿದೆ ಎಂದ ಹವಮಾನ ಇಲಾಖೆ ಹೇಳಿದೆ. ಮುಂದಿನ 3 ದಿನಗಳ ಕಾಲ ದೆಹಲಿಯು 3 ರಿಂದ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. IMD ಯ ಮುನ್ಸೂಚನೆಯ ಪ್ರಕಾರ, ಜನವರಿ 5 ರಿಂದ 7 ರವರೆಗೆ, ಇಲ್ಲಿ ಕನಿಷ್ಠ ತಾಪಮಾನವು 3 ರಿಂದ 4 ಡಿಗ್ರಿ ಸೆಲ್ಸಿಯಸ್ ಆಗಬಹುದೆಂದು ಮಾಹಿತಿ ನೀಡಿದೆ. ಜಮ್ಮು ಕಾಶ್ಮೀರದಲ್ಲಿ ಮೈನಸ್ 6.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ತೀವ್ರ ಚಳಿ ಮತ್ತು ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.
ಇತರ ರಾಜ್ಯಗಳಲ್ಲೂ ತೀವ್ರ ಚಳಿ: ದೆಹಲಿ ಮಾತ್ರವಲ್ಲದೆ ದೇಶದ ಇತರ ರಾಜ್ಯಗಳೂ ಚಳಿಯ ತೀವ್ರತೆಯನ್ನು ಎದುರಿಸುತ್ತಿವೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪ್ರತ್ಯೇಕ ಭಾಗಗಳಲ್ಲಿ ದಟ್ಟವಾದ ಮಂಜು ಗೋಚರಿಸುತ್ತದೆ. ಬಿಹಾರ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಮಧ್ಯಪ್ರದೇಶದಲ್ಲಿ ಚಳಿ ಶುರುವಾಗಿದೆ. ರಾಜಸ್ಥಾನದ ಶೇಖಾವತಿ ಮತ್ತು ಚುರು ಮುಂತಾದ ಪ್ರದೇಶಗಳಲ್ಲಿ ತಾಪಮಾನ ಶೂನ್ಯಕ್ಕಿಂತ ಕಡಿಮೆಯಾಗಿದೆ. ಇದಲ್ಲದೇ ಚಳಿಯ ದಿನದಿಂದ ಅತಿ ಚಳಿಯ ದಿನ ಎಂಬ ಸ್ಥಿತಿ ಉತ್ತರ ಪ್ರದೇಶದಲ್ಲಿ ಗೋಚರಿಸುತ್ತಿದೆ. ಇಲ್ಲಿ ತಾಪಮಾನವು ಸುಮಾರು 5 ರಿಂದ 6 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ಕರ್ನಾಟಕದಲ್ಲಿ ಇನ್ನೆರಡು ವಾರ ಚಳಿ:ನಿರಂತರ ಮಳೆಯಿಂದ ಬೇಸತ್ತಿದ್ದ ರಾಜ್ಯದ ಜನರು ಈಗ ಮೈ ಕೊರೆಯುವ ಚಳಿಯನ್ನು ಸಹಿಸಿಕೊಳ್ಳಬೇಕಿದೆ. ಸದ್ಯಕ್ಕೆ ಮಳೆಯ ಸಮಸ್ಯೆ ಇಲ್ಲ. ಆದರೆ, ಕನಿಷ್ಠ ತಾಪಮಾನ ಇಳಿಕೆಯಾಗುತ್ತಿರುವುದರಿಂದ ಚಳಿಯ ತೀವ್ರತೆ ಹೆಚ್ಚಾಗಲಿದೆ. ಇನ್ನೆರಡು ವಾರಗಳ ಕಾಲ ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಹಗಲು ವೇಳೆ ತೀವ್ರವಾದ ಬಿಸಿಲು ಕಂಡು ಬರಲಿದ್ದು, ರಾತ್ರಿ ವೇಳೆ ಚಳಿಯ ಪ್ರಮಾಣ ಹೆಚ್ಚಾಗಿರಲಿದೆ. ಈ ತಿಂಗಳು ಚಳಿಯ ಪ್ರಮಾಣ ಹೆಚ್ಚಾಗಲಿದೆ. ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ. ಎರಡು ವಾರಗಳ ನಂತರ ಚಳಿಯ ಪ್ರಮಾಣ ಇಳಿಕೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಪ್ರಯಾಣಿಕರಲ್ಲಿ ಮನವಿ ಮಾಡಿದ ಅಧಿಕಾರಿಗಳು: ದೆಹಲಿ ವಿಮಾನ ನಿಲ್ದಾಣವು ಗುರುವಾರ ಎಲ್ಲಾ ಪ್ರಯಾಣಿಕರಿಗೆ ಫಾಗ್ ಎಚ್ಚರಿಕೆ ನೀಡಿದೆ. ಕಡಿಮೆ ಗೋಚರತೆಯ ಕಾರ್ಯವಿಧಾನಗಳು ಜಾರಿಯಲ್ಲಿವೆ. ಎಲ್ಲಾ ವಿಮಾನ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿದ್ದು, ಪ್ರಯಾಣಿಕರು ನವೀಕರಿಸಿದ ವಿಮಾನ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ದಟ್ಟವಾದ ಮಂಜು ಮತ್ತು ಗೋಚರತೆ ಕೊರತೆಯಿಂದಾಗಿ ಅನೇಕ ರೈಲುಗಳು ತಡವಾಗಿ ಓಡಾಟ ಆರಂಭಿಸಿವೆ. 12 ರೈಲುಗಳು ತಡವಾಗಿ ಚಲಿಸುತ್ತಿದ್ದು, ಮಂಜಿನಿಂದಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ ಎರಡು ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ:ಚಾಮರಾಜನಗರದಲ್ಲಿ ಮಂಜಿನ ಚಾದರ.. ಚುಮುಚುಮು ಚಳಿ ಕಾಡಲ್ಲಿ ಹಸಿರಿನ ಕಚಗುಳಿ