ಹೈದರಾಬಾದ್: 2023ರ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ 103 ಮಂದಿ ಹಾಲಿ ಶಾಸಕರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2018ಕ್ಕೆ ಹೋಲಿಸಿದರೆ, 2023 ರ ವೇಳೆಗೆ ಅಭ್ಯರ್ಥಿಗಳ ಆಸ್ತಿಯ ಮೌಲ್ಯ ಗಮನಾರ್ಹವಾಗಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ, ಪ್ಲಾಟ್ಫಾರ್ಮ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಚುನಾವಣ ಕಣದಲ್ಲಿರುವ 103 ಮಂದಿ ಹಾಲಿ ಶಾಸಕರ ಆಸ್ತಿಗಳ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 103 ಶಾಸಕರ ಪೈಕಿ 90 ಶಾಸಕರ ಆಸ್ತಿ ಶೇ.3 ರಿಂದ 1331ರಷ್ಟು ಏರಿಕೆಯಾಗಿದ್ದರೆ ಉಳಿದ 13 ಶಾಸಕರ ಆಸ್ತಿ ಶೇ.1ರಿಂದ ಶೇ.79 ರಷ್ಟಕ್ಕೆ ಇಳಿಕೆಯಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಆಸ್ತಿ ಮೌಲ್ಯವು 2018 ರಲ್ಲಿ 23.55 ಕೋಟಿ ರೂ.ಗಳಿಂದ 2023 ರ ವೇಳೆಗೆ 58.93 ಕೋಟಿ ರೂ.ಗೆ ಅಂದರೆ ಶೇ.150 ರಷ್ಟು ಹೆಚ್ಚಾಗಿದೆ. ಅವರ ಪುತ್ರ ಕೆಟಿಆರ್ ಅವರ ಆಸ್ತಿ ಮೌಲ್ಯವು 41.82 ಕೋಟಿ ರೂ.ಗಳಿಂದ 53.31 ಕೋಟಿ ರೂ.ಗಳಿಗೆ ಏರಿದರೆ, ಕೆಸಿಆರ್ ಅವರ ಸಂಬಂಧಿ ಹರೀಶ್ ರಾವ್ ಅವರ ಆಸ್ತಿಯ ಮೌಲ್ಯವು 11.44 ಕೋಟಿ ರೂ.ಗಳಿಂದ 24.29 ಕೋಟಿ ರೂ.ಗೆ ಹೆಚ್ಚಳವಾಗಿದೆ. ಪ್ರಸ್ತುತ ಚುನಾವಣಾ ಕಣದಲ್ಲಿರುವ ಶಾಸಕರ ಸರಾಸರಿ ಆಸ್ತಿ 2018 ರಲ್ಲಿ 14.44 ಕೋಟಿ ರೂ.ಗಳಷ್ಟಿದ್ದರೆ, 2023 ರ ಚುನಾವಣೆಯಲ್ಲಿ ಇದು 23.87 ಕೋಟಿ ರೂ.ಗೆ ತಲುಪಿದೆ. ಐದು ವರ್ಷಗಳಲ್ಲಿ ಸರಾಸರಿ ಆಸ್ತಿ ಮೌಲ್ಯವು ರೂ.9.43 ಕೋಟಿಗಳಷ್ಟು ಹೆಚ್ಚಾಗಿದೆ.