ನವದೆಹಲಿ:ರಾಜ್ಯಗಳ ಬಜೆಟ್ ಗಾತ್ರಕ್ಕಿಂತಲೂ ರಾಜಕಾರಣಿಗಳ ಸಂಪತ್ತೇ ಅಧಿಕವಾಗಿದೆ. ಇತ್ತೀಚೆಗೆ ಶಾಸಕರು ಹೊಂದಿದ್ದ ಆಸ್ತಿ ವಿವರ ಬಹಿರಂಗವಾಗಿದ್ದು, ಅದರಲ್ಲಿ ಕರ್ನಾಟಕದ ಕೆಲ ಶಾಸಕರು ದೇಶದಲ್ಲೇ ಅತ್ಯಧಿಕ ಶ್ರೀಮಂತ ರಾಜಕಾರಣಿಗಳು ಎಂದು ಗುರುತಿಸಿಕೊಂಡಿದ್ದರು. ಇದೀಗ ಮತ್ತೊಂದು ಮಾಹಿತಿಯಲ್ಲಿ ದೇಶದ ಹಾಲಿ 4001 ಶಾಸಕರ ಸಂಪತ್ತು ಈಶಾನ್ಯ ರಾಜ್ಯಗಳ ಬಜೆಟ್‌ಗಿಂತಲೂ ಅಧಿಕ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,001 ಹಾಲಿ ಶಾಸಕರ ಒಟ್ಟು ಆಸ್ತಿ 54,545 ಕೋಟಿ ರೂ.ಗಳಾಗಿವೆ. ಇದು ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕೀಂ ರಾಜ್ಯಗಳ 2023-24ರ ಸಾಲಿನ ವಾರ್ಷಿಕ ಬಜೆಟ್‌ಗಿಂತಲೂ ಹೆಚ್ಚಾಗಿದೆ. ಮೂರು ರಾಜ್ಯಗಳ ಒಟ್ಟು ಬಜೆಟ್ ಗಾತ್ರ 49,103 ಕೋಟಿ ರೂ.ಗಳಾಗಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಕಳೆದ ಚುನಾವಣೆಗಳಲ್ಲಿ ಸ್ಪರ್ಧಿಸುವ ಮೊದಲು ಶಾಸಕರು ಸಲ್ಲಿಸಿದ ಅಫಿಡವಿಟ್‌ಗಳಿಂದ ಈ ಡೇಟಾವನ್ನು ಹೊರತೆಗೆಯಲಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲ್ಯೂ) ಈ ವರದಿಯನ್ನು ಬಿಡುಗಡೆ ಮಾಡಿದೆ. ದೇಶದ 4,001 ಶಾಸಕರು ಕೋಟ್ಯಂತರ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 54,545 ಕೋಟಿ ರೂಪಾಯಿಗಳಾಗಿವೆ. ಇದು ಈಶಾನ್ಯದ ಮೂರು ರಾಜ್ಯಗಳ ಬಜೆಟ್ ಗಾತ್ರಕ್ಕಿಂತಲೂ ಅಧಿಕವಾಗಿದೆ ಎಂದಿದೆ.