ಮುಂಬೈ (ಮಹಾರಾಷ್ಟ್ರ):ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಶಿವಸೇನೆಯ 40 (ಶಿಂಧೆ ಗುಂಪು) ಹಾಗೂ ಠಾಕ್ರೆ ಗುಂಪಿನ 14 ಶಾಸಕರಿಗೆ ನೋಟಿಸ್ ನೀಡಿದ್ದಾರೆ. ಎರಡೂ ಗುಂಪಿನ ಶಾಸಕರಿಗೆ ತಮ್ಮ ಅಭಿಪ್ರಾಯ ಮಂಡಿಸುವಂತೆ ನೋಟಿಸ್ ಕಳುಹಿಸಲಾಗಿದೆ. ಶಾಸಕರಿಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಕೆ ಮಾಡಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.
ಠಾಕ್ರೆ ಗುಂಪು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ವಿಷಯದ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ವಿಧಾನಸಭೆಯ ಸ್ಪೀಕರ್‌ಗೆ ಸೂಚಿಸಬೇಕು ಎಂದು ಒತ್ತಾಯಿಸಿದೆ. ಈ ಅರ್ಜಿಯ ನಂತರ, ರಾಹುಲ್ ನಾರ್ವೇಕರ್ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದ ಸುನೀಲ್ ಪ್ರಭು:ಎರಡೂ ಗುಂಪಿನ ಶಾಸಕರ ವಿಚಾರಣೆ ನಂತರ, ಅನರ್ಹತೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿನ ಅಧಿಕಾರದ ಹೋರಾಟದ ಕುರಿತು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಅವರಿಗೆ ನೀಡಿದೆ. ಅದರ ನಂತರವೂ ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ, ಠಾಕ್ರೆ ಗುಂಪಿನ ನಾಯಕ ಸುನೀಲ್ ಪ್ರಭು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲು ವಿಧಾನಸಭಾಧ್ಯಕ್ಷರು ನಿರ್ದೇಶನ ನೀಡಬೇಕು ಎಂದು ಸುನೀಲ್ ಪ್ರಭು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಆಗ್ರಹಿಸಿದ್ದರು.
ಶಿವಸೇನೆಗೆ ಮಾಹಿತಿ ಕೇಳಿದ್ದ ವಿಧಾನಸಭೆ ಸ್ಪೀಕರ್ ನಾರ್ವೇಕರ್:ಕಾನೂನು ವಿಷಯಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಶಾಸಕರ ಅನರ್ಹತೆಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳ ತನಿಖೆಗಾಗಿ, ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಈ ಹಿಂದೆ ಶಿವಸೇನೆಯ ಸಂವಿಧಾನದ ಬಗ್ಗೆ ಹಾಗೂ ಪಕ್ಷದ ಮುಖ್ಯಸ್ಥರು ಯಾರು ಎಂಬುದರ ಕುರಿತು ಮಾಹಿತಿ ಕೇಳಿದ್ದರು.
ವಿಶ್ವಾಸ ವ್ಯಕ್ತಪಡಿಸಿದ ಅಂಬಾದಾಸ್ ದಾನ್ವೆ:ಮೂರು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಅಧಿಕಾರ ನೀಡಿದೆ. ಇದೀಗ ಅನರ್ಹಗೊಳಿಸುವ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಇದರಿಂದ ಶಿಂಧೆ ಗುಂಪಿನ ಶಾಸಕರಲ್ಲಿ ಭಯ ಉಂಟಾಗಿದೆ. ಶಿವಸೇನೆಯ ಸಂವಿಧಾನದ ಪ್ರತಿಯನ್ನು ವಿಧಾನಸಭಾಧ್ಯಕ್ಷರು ಚುನಾವಣಾ ಆಯೋಗದಿಂದ ಕೇಳಿದ್ದಾರೆ. ಈ ಪ್ರತಿಯು ಕಳೆದ ವಾರ ವಿಧಾನಸಭೆ ಕಚೇರಿಗೆ ಬಂದಿದೆ. ಶಿವಸೇನೆಯಲ್ಲಿ ಒಡಕು ಮೂಡುವ ಮುನ್ನ ಪಕ್ಷ ಯಾರಿಗೆ ಸೇರಿದ್ದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಹೀಗಾಗಿ ರಾಷ್ಟ್ರಪತಿಗಳು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಹೇಳಿದರು. ಅಲ್ಲದೆ, ಮುಖ್ಯಮಂತ್ರಿ ಸೇರಿ 16 ಶಾಸಕರನ್ನು ಅನರ್ಹಗೊಳಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:Maharashtra political crisis: ಎಲ್ಲ ಬಂಡುಕೋರರನ್ನು ಎನ್‌ಸಿಪಿಯಿಂದ ಅನರ್ಹಗೊಳಿಸಲಾಗುವುದು: ಶರದ್ ಪವಾರ್