ನವದೆಹಲಿ/ಮುಂಬೈ:ದೇಶದ ಗಮನ ಸೆಳೆದಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಅಂತಿಮ ಹಂತಕ್ಕೆ ತಲುಪಿದೆ. ದೇಶದ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಹಾಗೂ ಹಿಂದಿ ಪ್ರಾಬಲ್ಯವಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಅಣಿಯಾಗಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ತೆಲಂಗಾಣದಲ್ಲಿ ಮೇಲುಗೈ ಸಾಧಿಸಿದೆ. ಆದರೆ, ತನ್ನ ಆಡಳಿತದ ಹಿಡಿತದಲ್ಲಿದ್ದ ರಾಜಸ್ಥಾನ ಹಾಗೂ ಛತ್ತೀಸ್ಗಢ ರಾಜ್ಯಗಳನ್ನು ಕಳೆದುಕೊಂಡಿದೆ.
ಮುಂಬರುವ 2024ರ ಲೋಕಸಭೆ ಚುನಾವಣೆಗೆ ಮಿಜೋರಾಂ ಸೇರಿ ಪಂಚ ರಾಜ್ಯಗಳ ಚುನಾವಣೆಯು ಸೆಮಿಫೈನಲ್ ಎಂದೇ ಬಿಂಬಿತವಾಗಿದೆ. ಮಿಜೋರಾಂನಲ್ಲಿ ನಾಳೆ (ಡಿ.4) ಫಲಿತಾಂಶ ಪ್ರಕಟವಾದರೂ, ಲೋಕ ಸಮರದ ಮೇಲೆ ಆ ರಾಜ್ಯದ ಪರಿಣಾಮ ಕಡಿಮೆ. ಆದರೆ, ಹಿಂದಿ ಪ್ರಾಬಲ್ಯದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢ ಕೇಸರಿ ಪಡೆಯಲ್ಲಿ ಹುಮ್ಮಸ್ಸು ಹೆಚ್ಚಿಸಿರುವುದು ಸುಳ್ಳಲ್ಲ. ಈ ಚುನಾವಣೆಯ ಫಲಿತಾಂಶಗಳನ್ನು ಕಮಲ ಪಕ್ಷದ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಈಗಾಗಲೇ, 2024ರ ಲೋಕಸಭೆ ಚುನಾವಣೆಯಲ್ಲೂ ಪ್ರಧಾನಿ ಮೋದಿ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಸಂದೇಶ ನೀಡಿದೆ ಎಂದು ಸಾರುತ್ತಿದ್ದಾರೆ.
ಮತ್ತೊಂದೆಡೆ, ಈ ಚುನಾವಣೆಗಳಿಗೂ ಮುನ್ನ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು 'ಇಂಡಿಯಾ' ಮೈತ್ರಿಕೂಟದ ಹೆಸರಲ್ಲಿ ಎದುರಿಸಲು ಕಾಂಗ್ರೆಸ್ ಹಾಗೂ ಇತರ ಪ್ರಮುಖ ಪ್ರತಿಪಕ್ಷಗಳು ಕಾರ್ಯಯಂತ್ರ ರೂಪಿಸುತ್ತಿವೆ. ಇದೀಗ ಈ ಫಲಿತಾಂಶಗಳು 'ಇಂಡಿಯಾ' ಮೈತ್ರಿಕೂಟದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಚರ್ಚೆ ಆರಂಭವಾಗಿದೆ. ಅಂತೆಯೇ, ಈ ಕುರಿತು ಮೈತ್ರಿಕೂಟದ ಪ್ರಮುಖ ನಾಯಕ, ಎನ್‌ಸಿಪಿ ವರಿಷ್ಠ ಶರದ್ ಪವಾರ್ ಪ್ರತಿಕ್ರಿಯಿಸಿದ್ದು, ತಮ್ಮ ಮೈತ್ರಿಕೂಟದ ಮೇಲೆ ಫಲಿತಾಂಶ ಪರಿಣಾಮ ಬೀರುತ್ತದೆ ಎಂಬ ವಾದವನ್ನು ತಳ್ಳಿಹಾಕಿದ್ದಾರೆ.