ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಮೂರರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಸಮೀಕ್ಷೆಗಳನ್ನು ಮೀರಿ ಗೆಲುವು ಸಾಧಿಸುವ ಸಾಧ್ಯತೆ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಇಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತನಾಡುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಹೊರಡಿಸಿದ ಟ್ರೆಂಡ್‌ಗಳ ಪ್ರಕಾರ, ಮಧ್ಯಪ್ರದೇಶದ 230 ಸ್ಥಾನಗಳಲ್ಲಿ 155 ಮತ್ತು ಛತ್ತೀಸ್‌ಗಢದ 90 ಸ್ಥಾನಗಳ ಪೈಕಿ 57ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ 199 ಸ್ಥಾನಗಳಲ್ಲಿ ಬಿಜೆಪಿ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೇ ಈ ಮೂರು ರಾಜ್ಯದಲ್ಲಿ ಬಿಜೆಪಿ ಮ್ಯಾಜಿಕ್ ಸಂಖ್ಯೆಯನ್ನು ಮೀರಿ ಕ್ಷೇತ್ರಗಳನ್ನು ಪಡೆದುಕೊಂಡಿದೆ.
ಮಧ್ಯಪ್ರದೇಶದಲ್ಲಿ 116 ಮ್ಯಾಜಿಕ್ ಸಂಖ್ಯೆ ಆಗಿದ್ದರೆ, ಅಲ್ಲಿ 166 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ 100 ಮ್ಯಾಜಿಕ್ ಸಂಖ್ಯೆ ಆಗಿದ್ದು, ಬಿಜೆಪಿ 111 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹಾಗೇ ಛತ್ತೀಸ್‌ಗಢದಲ್ಲಿ 46 ಮ್ಯಾಜಿಕ್ ಸಂಖ್ಯೆ ಆಗಿದ್ದು, ಅದರಲ್ಲಿ ಬಿಜೆಪಿ 57 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಮೂರು ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ.