ನವದೆಹಲಿ:ತೀವ್ರ ಬಿರುಸಿನಿಂದ ಕೂಡಿದ ರಾಜಸ್ಥಾನ ವಿಧಾನಸಭೆ ಚುನಾವಣೆ ಮುಗಿದಿದ್ದು, ರಾಜ್ಯಾದ್ಯಂತ ಶೇಕಡಾ 68 ರಷ್ಟು ಮತದಾನವಾಗಿದೆ. ಬಿಜೆಪಿ- ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಲ್ಲಿ ಕುರುಡು ಕಾಂಚಾಣ ಸದ್ದು ಮಾಡಿದೆ. ಮತದಾನದ ಕೊನೆಯ ದಿನ ಸೇರಿದಂತೆ ರಾಜ್ಯದಲ್ಲಿ 690 ಕೋಟಿ ರೂಪಾಯಿ ನಗದು, ಮದ್ಯ, ಡ್ರಗ್ಸ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂದು ಮತದಾನ ಮುಗಿದ ನಂತರ ಚುನಾವಣಾ ಆಯೋಗವು ಹಂಚಿಕೊಂಡ ಅಂಕಿ - ಅಂಶಗಳ ಪ್ರಕಾರ, ವಿವಿಧ ಜಾರಿ ಸಂಸ್ಥೆಗಳಿಂದ ಒಟ್ಟು 690 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. 2018 ರಲ್ಲಿ ನಡೆದ ಚುನಾವಣೆಗಿಂತ ಈ ಬಾರಿ ಶೇಕಡಾ 970 ರಷ್ಟು ಹೆಚ್ಚಿನ ಹಣ ಹರಿದಾಡಿದೆ. ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹಗಳು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.
ಸಿ-ವಿಜಿಲ್ಗೆ ದೂರುಗಳ ಸುರಿಮಳೆ:ಭ್ರಷ್ಟಾಚಾರ, ಹಣದ ಆಮಿಷದ ಘಟನೆಗಳು ಕಂಡು ಬಂದಲ್ಲಿ ದೂರು ನೀಡಲು ಆರಂಭಿಸಲಾಗಿರುವ ಸಿ-ವಿಜಿಲ್ ಆ್ಯಪ್ಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಶನಿವಾರ (ನವೆಂಬರ್ 25) ಬೆಳಗ್ಗಿನವರೆಗೆ ಒಟ್ಟು 20,298 ದೂರುಗಳು ಬಂದಿವೆ. ಇದರಲ್ಲಿ 20,245 ವಿಲೇವಾರಿ ಮಾಡಲಾಗಿದೆ. ಇನ್ನೂ 53 ದೂರುಗಳು ಬಾಕಿ ಇವೆ. ಜನರು ನೀಡಿದ ದೂರುಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲು ಈ ಆ್ಯಪ್ ಅನುವು ಮಾಡಿಕೊಟ್ಟಿದೆ.