ನವದೆಹಲಿ: ಕೇರಳ, ತಮಿಳುನಾಡು, ಅಸ್ಸೋಂ ಹಾಗೂ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲಿರುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪಕ್ಷದ ಅಭ್ಯರ್ಥಿಗಳ ಹೆಸರು ಹಾಗೂ ಕ್ಷೇತ್ರವನ್ನು ಘೋಷಿಸಿದ್ದಾರೆ.
ಪಾಲಕ್ಕಾಡ್ನಿಂದ ಮೆಟ್ರೋಮ್ಯಾನ್ ಶ್ರೀಧರನ್ ಕಣಕ್ಕೆ
ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ 140 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 140ರ ಪೈಕಿ 115 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದ 'ಮೆಟ್ರೋ ಮ್ಯಾನ್' ಎಂದು ಹೆಸರುವಾಸಿಯಾಗಿರುವ ದೆಹಲಿ ಮೆಟ್ರೋದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಇ. ಶ್ರೀಧರನ್ ಅವರಿಗೆ ಪಾಲಕ್ಕಾಡ್ನಿಂದ ಟಿಕೆಟ್ ನೀಡಿದೆ.
ಇನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಕಾಸರಗೋಡಿನ ಮಂಜೇಶ್ವರ ಮತ್ತು ಪತ್ತನಂತಿಟ್ಟದ ಕೊನ್ನಿ - ಈ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕುಮ್ಮಾನಂ ರಾಜಶೇಖರನ್ ಅವರು ನೆಮೊಮ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಡಿಜಿಪಿ ಜಾಕೋಬ್ ಥಾಮಸ್ ಅವರು ಇರಿಂಜಲಕುಡದಿಂದ ಸ್ಪರ್ಧಿಸಲಿದ್ದಾರೆ.
ಖುಷ್ಬೂ, ಅಣ್ಣಾಮಲೈಗೂ ಟಿಕೆಟ್
ತಮಿಳುನಾಡಿನಲ್ಲಿ ಕೂಡ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಎಂಕೆ - ಕಾಂಗ್ರೆಸ್ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ.
ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್
ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಸುಂದರ್ ಅವರಿಗೆ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್ ಮುರುಗನ್ ಅವರು ಧರಪುರಂ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಅಸ್ಸೋಂನ 92 ಕ್ಷೇತ್ರಗಳಿಂದ ಬಿಜೆಪಿ ಸ್ಪರ್ಧೆ
ಅಸ್ಸೋಂನಲ್ಲಿ ಮಾರ್ಚ್ 27ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ 126 ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯಲಿದೆ. 92 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದ್ದು, ಮೂರನೇ ಹಂತಕ್ಕೆ 17 ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಧರ್ಮಪುರ ಕ್ಷೇತ್ರದಿಂದ ಚಂದ್ರ ಮೋಹನ್ ಪಟೋವರಿ ಸ್ಪರ್ಧಿಸಲಿದ್ದಾರೆ.
ಬಾಬುಲ್ ಸುಪ್ರಿಯೋ, ರಾಜೀಬ್ ಬ್ಯಾನರ್ಜಿ ಕಣಕ್ಕೆ
ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಿಗೆ ಎಂಟು ಹಂತಗಳಲ್ಲಿ ಮಾರ್ಚ್ 27 ಮತ್ತು ಏಪ್ರಿಲ್ 29 ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಮೂರನೇ ಹಂತದ ಚುನಾವಣೆಗೆ 27 ಹಾಗೂ 4ನೇ ಹಂತದ ಚುನಾವಣೆಗೆ 36 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ.
ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಟಾಲಿಗಂಜ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ನಟ ಯಶ್ ದಾಸ್ ಗುಪ್ತಾ ಚಂಡಿತಾಲದಿಂದ ಕಣಕ್ಕಿಳಿದಿದ್ದಾರೆ. ಅಲಿಪುರ್ದಾರ್ ಕ್ಷೇತ್ರದಿಂದ ಅರ್ಥಶಾಸ್ತ್ರಜ್ಞ ಅಶೋಕ್ ಲಾಹಿರಿ ಅವರಿಗೆ ಹಾಗೂ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ರಾಜೀಬ್ ಬ್ಯಾನರ್ಜಿಗೆ ಡೊಮ್ಜೂರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ.