ಶಿಲ್ಲಾಂಗ್/ ಕೊಹಿಮಾ:ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ನಿಗದಿತ ಸಮಯದ ವೇಳೆಗೆ ಕ್ರಮವಾಗಿ 74.32% ಮತ್ತು 82.42% ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಎರಡೂ ಈಶಾನ್ಯ ರಾಜ್ಯಗಳಿಗೆ ಒಂದೇ ಹಂತದ ಮತದಾನ ನಡೆದಿದ್ದು, ಸುಮಾರು 33 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.
ಮೇಘಾಲಯದಲ್ಲಿ ಒಟ್ಟು 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಲ್ಲಿ ಮತದಾನವಾಗಿದೆ. 12 ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುವ ಮುನ್ನವೇ ಪುರುಷ, ಮಹಿಳೆಯರು ಮತ್ತು ಮೊದಲ ಬಾರಿಗೆ ಮತದಾರರು ಸೇರಿದಂತೆ ವಿವಿಧ ವಯೋಮಾನದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ಈವರೆಗೂ ಯಾವುದೇ ಅಹಿತಕರ ಘಟನೆಗಳ ಬಗ್ಗೆ ವರದಿ ಬಂದಿಲ್ಲ. ಕೆಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ತಾಂತ್ರಿಕ ದೋಷ ಉಂಟಾಗಿ ಮತದಾನಕ್ಕೆ ಅಡ್ಡಿಯಾಗಿತ್ತು ಎಂದು ಮೇಘಾಲಯ ಮುಖ್ಯ ಚುನಾವಣಾ ಅಧಿಕಾರಿ ಖಾರ್ಕೊಂಗೊರ್ ತಿಳಿಸಿದರು.
13 ರಾಜಕೀಯ ಪಕ್ಷಗಳ ಸೆಣಸಾಟ:ರಾಜ್ಯದಲ್ಲಿ 36 ಮಹಿಳೆಯರು ಸೇರಿದಂತೆ ಒಟ್ಟು 369 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 10.92 ಲಕ್ಷ ಮಹಿಳೆಯರು ಸೇರಿದಂತೆ ಸುಮಾರು 21.75 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ನಾಲ್ಕು ರಾಷ್ಟ್ರೀಯ ಪಕ್ಷಗಳು ಸೇರಿ 13 ರಾಜಕೀಯ ಪಕ್ಷಗಳು ಸೆಣಸಾಟ ನಡೆಸಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ತಲಾ 60 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಪ್ರಮುಖ ಪ್ರತಿಪಕ್ಷ ತೃಣಮೂಲ ಕಾಂಗ್ರೆಸ್ 56 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ನೇತೃತ್ವದ ಎನ್‌ಪಿಪಿ 57 ಅಭ್ಯರ್ಥಿಗಳು, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) 46, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 11, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ 9, ಗಣ ಸುರಕ್ಷಾ ಪಕ್ಷ 1, ಗರೋ ನ್ಯಾಷನಲ್ ಕೌನ್ಸಿಲ್ 2, ಜನತಾ ದಳ (ಯುನೈಟೆಡ್) 3, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 2, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) 2, ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ 18 ಹುರಿಯಾಳುಗಳನ್ನು ಹೊಂದಿದೆ.