ಜೈಪುರ (ರಾಜಸ್ಥಾನ):ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತ ಪಕ್ಷವನ್ನು ಬದಲಾಯಿಸುವ ಸಂಪ್ರದಾಯವನ್ನು ಕಳೆದ ಮೂರು ದಶಕಗಳಿಂದ ಇಲ್ಲಿನ ಮತದಾರ ಪ್ರಭುಗಳು ಹಾಕಿಕೊಂಡಿದ್ದಾರೆ. ಈ ಬಾರಿ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಿದೆ. ಆದರೆ, ಇದರ ಮಧ್ಯೆಯೂ ಆಡಳಿತಾರೂಢ ಕಾಂಗ್ರೆಸ್ ತನ್ನದೇ ಆದ ಸ್ವಯಂಕೃತ ಅಪರಾಧದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿರುವ ಬಗ್ಗೆ ಚರ್ಚೆ ಆರಂಭವಾಗಿದೆ.
ಮರಭೂಮಿ ರಾಜ್ಯದ ಕಾಂಗ್ರೆಸ್ ಘಟಕದಲ್ಲಿನ ಆಂತರಿಕ ಕಚ್ಚಾಟವೇ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣ. ಸರ್ಕಾರದ ಬಗ್ಗೆ ಯುವಕರು, ಮಹಿಳೆಯರಲ್ಲಿ ಅಡಗಿದ್ದ ಕೋಪ ಜೊತೆಗೆ ಆಡಳಿತ ವಿರೋಧಿ ಅಲೆ, ನಕಾರಾತ್ಮಕ ಸಾಮಾಜಿಕ ಸಮೀಕರಣಗಳೆಲ್ಲವೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಬೇಕಾದ ಅಂಶಗಳು ಎಂಬ ಮಾತುಗಳು ಕೇಳಿಬರುತ್ತಿವೆ. ಸರ್ಕಾರವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಹೀನಾಯ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಸ್ವಯಂಕೃತ ಅಪರಾಧಗಳೇ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಹಾನಿಯನ್ನುಂಟು ಮಾಡಿವೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಗಹ್ಲೋಟ್ ವರ್ಸಸ್ ಪೈಲಟ್:ರಾಜಸ್ಥಾನ ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟ ಬಹಿರಂಗವಾಗಿಯೇ ನಡೆಯುತ್ತಿತ್ತು. ಉನ್ನತ ನಾಯಕರಾದ ಸಿಎಂ ಅಶೋಕ್ ಗಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಘರ್ಷಣೆಗಳು ಪಕ್ಷದ ವರ್ಚಸ್ಸಿಗೆ ಅಪಾರ ಹೊಡೆತ ನೀಡಿವೆ. ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸಲು ಪೈಲಟ್ ಆಮರಣಾಂತ ಉಪವಾಸವನ್ನೂ ಕೈಗೊಂಡಿದ್ದರು. ಭ್ರಷ್ಟಾಚಾರದ ವಿರುದ್ಧದ ತನ್ನ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದರು. ಆದರೆ, ಇದರ ಪರಿಣಾಮ ಪಕ್ಷದ ವಲಯಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಿದೆ.