ಹೈದರಾಬಾದ್:ತೆಲಂಗಾಣದಲ್ಲಿ ಮತ ಎಣಿಕೆ ಪ್ರಾರಂಭಗೊಂಡಿದೆ. 119 ಸದಸ್ಯ ಬಲದ ಇಲ್ಲಿನ ವಿಧಾನಸಭೆಗೆ ನವೆಂಬರ್ 30ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸುವ ತವಕದಲ್ಲಿದೆ ಎಂದು ತಿಳಿಸಿವೆ. ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ 60 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಆರ್‌ಎಸ್ 48 ಸ್ಥಾನ, ಬಿಜೆಪಿ 5 ಮತ್ತು ಎಐಎಂಐಎಂ 6 ಸ್ಥಾನಗಳನ್ನು ಗೆಲ್ಲಬಹುದು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ 119 ಸ್ಥಾನಗಳ ಪೈಕಿ 88 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 19 ಮತ್ತು ಬಿಜೆಪಿ 1 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.
ತೆಲಂಗಾಣ ಸಿಎಂ ಕೆಸಿಆರ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಗಜ್ವೇಲ್ ಮತ್ತು ಕಾಮರೆಡ್ಡಿಯಿಂದ ಸ್ಪರ್ಧಿಸುತ್ತಿದ್ದಾರೆ. ಆರಂಭಿಕ ಹಂತದ ಮತ ಎಣಿಕೆಯಲ್ಲಿ ಅವರು ಎರಡೂ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರೇವಂತ್ ರೆಡ್ಡಿ ಅವರು ಕೆಸಿಆರ್ ವಿರುದ್ಧ ಸ್ಪರ್ಧಿಸಿದ್ದಾರೆ.
ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತಿದೆ, ಮೊದಲ ಸುತ್ತಿನ ಫಲಿತಾಂಶಗಳು 9.30 ಕ್ಕೆ ಹೊರಬೀಳಲಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ ಮೇಲ್ವಿಚಾರಣೆಗಾಗಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಆಯುಕ್ತ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ರೊನಾಲ್ಡ್ ರೋಸ್ ಅವರು ನಗರದ ಹಲವು ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.