ಮಿಜೋರಾಂ/ಛತ್ತೀಸ್‌ಗಢ:ಮುಂಬರುವ ಲೋಕಸಭೆಚುನಾವಣೆಗೆ 'ಸೆಮಿಫೈನಲ್' ಎಂದೇ ಪರಿಗಣಿಸಲ್ಪಟ್ಟ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂಗವಾಗಿ ಮಂಗಳವಾರ ಎರಡು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಮಿಜೋರಾಂನ ಎಲ್ಲಾ 40 ವಿಧಾನಸಭಾ ಸ್ಥಾನಗಳು ಮತ್ತು ಛತ್ತೀಸ್‌ಗಢದ 20 ಸ್ಥಾನಗಳಿಗೆ ನವೆಂಬರ್ 7ರಂದು ಮೊದಲ ಹಂತದಲ್ಲಿ ವೋಟಿಂಗ್ ನಡೆಯಲಿದೆ. ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಭಾನುವಾರ ಮುಕ್ತಾಯಗೊಂಡಿದೆ. ಈ ಎರಡು ರಾಜ್ಯಗಳ ಒಟ್ಟು 60 ವಿಧಾನಸಭಾ ಸ್ಥಾನಗಳಲ್ಲಿ ಮತದಾನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
ಮಿಜೋರಾಂ ವಿಧಾನಸಭಾ ಚುನಾವಣೆ:ಮಿಜೋರಾಂನಲ್ಲಿ 40 ವಿಧಾನಸಭಾ ಸ್ಥಾನಗಳಿವೆ. ಇಲ್ಲಿ ಒಟ್ಟು 8.57 ಲಕ್ಷ ಮತದಾರರಿದ್ದಾರೆ. 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್, ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ ಮತ್ತು ಕಾಂಗ್ರೆಸ್ ಪೂರ್ಣ ಪ್ರಮಾಣದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ 23 ಅಭ್ಯರ್ಥಿಗಳನ್ನು ಮತ್ತು ಆಮ್ ಆದ್ಮಿ ಪಕ್ಷವು ನಾಲ್ಕು ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. 27 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಐದು ವರ್ಷಗಳ ಹಿಂದೆ ಕೈತಪ್ಪಿ ಹೋದ ಅಧಿಕಾರವನ್ನು ಮರಳಿ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ ಅಲ್ಲಿ ರಾಹುಲ್ ಗಾಂಧಿಯಂತಹ ನಾಯಕರೊಂದಿಗೆ ಪ್ರಚಾರ ನಡೆಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋ ಮತದಾರರಿಗೆ ವಿಡಿಯೋ ಸಂದೇಶ ನೀಡಿದ್ದರು. ಅದ್ಭುತ ಮಿಜೋರಾಂಗೆ ಬಿಜೆಪಿ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದರು. ಅಕ್ಟೋಬರ್ 30ರಂದು ಪ್ರಧಾನಿ ಮಿಜೋರಾಂಗೆ ಭೇಟಿ ನೀಡಬೇಕಾಗಿತ್ತು, ಆದರೆ ಇದ್ದಕ್ಕಿದ್ದಂತೆ ರದ್ದಾಗಿದೆ.
ಮಿಜೋರಾಂ ಚುನಾವಣೆ:ಚುನಾವಣಾ ಆಯೋಗವು ಮಿಜೋರಾಂನಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ವೃದ್ಧರು, ವಿಶೇಷಚೇತರಿಗೆ ತಮ್ಮ ಮನೆಯಿಂದಲೇ ಮತದಾನ ಮಾಡಲು ಅಂಚೆ ಮತಪತ್ರ ಒದಗಿಸಿದೆ. 2,059 ವೃದ್ಧರು, ಅಂಗವಿಕಲರು ಮತ್ತು 8,526 ಸರ್ಕಾರಿ ನೌಕರರು ಮತದಾನದ ಹಕ್ಕು ಚಲಾಯಿಸಿದ್ದಾರೆ. ಒಟ್ಟು 10,585 ಮಂದಿ ಈ ಸೌಲಭ್ಯ ಪಡೆದಿದ್ದಾರೆ ಎಂದು ರಾಜ್ಯ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.